ನ್ಯೂಸ್

ಕನ್ನಡಾಂಬೆ ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣ ಜ.27ಕ್ಕೆ|Bhubaneswari bronze statue

ಬೆಂಗಳೂರು: ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ನಿರ್ಮಿಸಲಾಗಿರುವ 25 ಅಡಿ ಎತ್ತರದ ಕಂಚಿನ ಪ್ರತಿಮೆ ಭುವನೇಶ್ವರಿ ತಾಯಿಗೆ ಜ.27ರಿಂದ ನಿತ್ಯ ಆರ್ಚನೆ ನೆರವೇರಲಿದೆ(Kannadambe Bhubaneswari bronze statue unveiled on January 27).

ಜ.27 ರಂದು ಸಂಜೆ 4.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಈ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಈ ಹಬ್ಬದ ವಾತಾವರಣದಲ್ಲಿ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ಪಾಲ್ಗೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಹೊಯ್ಸಳ ಶೈಲೀಯ ಪೀಠ ನಿರ್ಮಾಣ

ಒಟ್ಟು 21.24 ಕೋಟಿ ರೂ. ವೆಚ್ಚದಲ್ಲಿ ಈ ಪ್ರತಿಮೆ ನಿರ್ಮಿಸಲಾಗಿದೆ. ನಾಡದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ. ಈ ನಕ್ಷೆಯ ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆ ಕೆತ್ತಲಾಗಿದೆ. ಕರ್ನಾಟಕದ ಪ್ರಸಿದ್ಧ ಶಿಲ್ಪಕಲಾ ಶೈಲಿಗಳಾದ ಹೊಯ್ಸಳ, ಚಾಲುಕ್ಯ, ಕದಂಬ ಹಾಗೂ ಆಧುನಿಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ ಪ್ರತಿಮೆ ನಿರ್ಮಿಸಲಾಗಿದೆ. ಇದರಲ್ಲಿ ರಾಜಲಾಂಛನಗಳಾದ ಹೊಯ್ಸಳ ಲಾಂಛನ, ವೈಜಯಜಯಂತಿ ಮಾಲೆ, ಕಂಠಿಹಾರ, ಗಂಡ ಭೇರುಂಡ ಇರಲಿದೆ ಎಂದು ಹೇಳಿದರು.

ನಾಡದೇವಿ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಇದಕ್ಕೆಂದೇ ಪಶ್ಚಿಮಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ಇರಲಿದೆ ಎಂದರು.

ಪ್ರತಿಮೆ ಅನಾವರಣದ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ 4 ದಿಕ್ಕುಗಳಿಂದ ಮೆರವಣಿಗೆ ಆಗಮಿಸಲಿದ್ದು, ಜ್ಞಾನಪೀಠ ಪುರಸ್ಕೃತರು ಹಾಗೂ ನಾಡಿನ ಹೆಸರಾಂತ ಮಹನೀಯರ ಫೋಟೋಗಳನ್ನು ಇಡಲಾದ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಲಿದೆ.

ಪೂರ್ವ ದಿಕ್ಕಿನಿಂದ (ಇಂದಿರಾ ನಗರ ): ಪಂಪ, ರನ್ನ, ಪೊನ್ನ, ಜನ್ನ, ಸರ್.ಎಂ. ವಿಶ್ವೇಶ್ವರಯ್ಯ, ಸರ್ ಸಿ.ವಿ. ರಾಮನ್, ಸಿ.ಎನ್.ಆರ್. ರಾವ್, ಭೀಮ್‌ಸೇನ್ ಜೋಷಿ, ಡಾ. ರಾಜ್‌ಕುಮಾರ್, ಎಸ್. ನಿಜಲಿಂಗಪ್ಪ, ಶ್ರೀ ಶಿವಕುಮಾರ ಸ್ವಾಮೀಜಿ, ದೇ. ಜವರೇಗೌಡ, ಡಾ. ವಿರೇಂದ್ರ ಹೆಗಡೆ, ಡಾ. ಪುನೀತ್ ರಾಜ್‌ಕುಮಾರ್ ಅವರ ಫೋಟೋವಿರುವ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಲಿದೆ.

ಪಶ್ಚಿಮ ದಿಕ್ಕು: (ಕೆಂಗೇರಿ ಉಪನಗರ ): ಜ್ಞಾನಪೀಠ ಪ್ರಶಸ್ತಿ ಪುರಸ್ಕತರು ಹಾಗೂ ರಾಷ್ಟ್ರಕವಿಗಳಾದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ. ಗೋಕಾಕ್, ಡಾ. ಯು. ಆರ್. ಅನಂತ ಮೂರ್ತಿ, ಡಾ. ಗಿರೀಶ್ ಕಾರ್ನಾಡ್, ಡಾ. ಚಂದ್ರಶೇಖರ ಕಂಬಾರ, ಮಂಜೇಶ್ವರ ಗೋವಿಂದ ಪೈ, ಡಾ. ಜಿ.ಎಸ್. ಶಿವರುದ್ರಪ್ಪ ಅವರ ಫೋಟೋ ಮೆರವಣಿಗೆಯಲ್ಲಿ ಬರಲಿದೆ.

ಉತ್ತರ ದಿಕ್ಕು : (ಹೆಬ್ಬಾಳ) ಈ ದಿಕ್ಕಿನಿಂದ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಅರಸರು, ಗಂಗರು, ಮೈಸೂರು ರಾಜ್ಯರ ಲಾಂಛನ ಹಾಗೂ ಹಲ್ಮಿಡಿ ಶಾಸನದ ಪ್ರತಿರೂಪ ಇರಲಿದೆ.

ದಕ್ಷಿಣ ದಿಕ್ಕು : (ಬಸವನಗುಡಿ ಬುಲ್ ಟೆಂಪಲ್ ) ಇನ್ನು ದಕ್ಷಿಣ ದಿಕ್ಕಿನಿಂದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ, ಕನಕದಾಸರು, ಪುರಂದರದಾಸರು, ಸಂಚಿ ಹೊನ್ನಮ್ಮ, ದಾನ ಚಿಂತಾಮಣಿ ಅತ್ತಿಮಬ್ಬೆ, ಅಕ್ಕಮಹಾದೇವಿ, ಕುಮಾರವ್ಯಾಸ, ಸಂತ ಶಿಶುನಾಳ ಷರೀಫ, ರೆವರೆಂಡ್ ಎ್ ಕಿಟ್ಟೆಲ್, ಬಿ.ಎಲ್. ರೈಸ್ ಅವರ ಪಲ್ಲಕ್ಕಿ ಬರಲಿದ್ದು, ನಾಲ್ಕು ದಿಕ್ಕುಗಳಿನಿಂದ ಮೆರವಣಿಗೆ ಸಾಗಿ ಅಂತಿಮವಾಗಿ ನಾಡದೇವಿ ಭುವನೇಶ್ವರಿ ಪ್ರತಿಮೆ ಇರುವ ವಿಧಾನಸೌಧದ ಬಳಿ ತಲುಪಲಿವೆ. ಅಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರತಿಯೊಂದು ದಿಕ್ಕಿನಲ್ಲಿ ಶಾಸಕರು ಮೆರವಣಿಗೆ ಚಾಲನೆ ನೀಡಲಾಗಿದ್ದು, ಹತ್ತಾರು ಕಲಾ ತಂಡಗಳು ಸೇರಿದಂತೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ನಾಡದೇವಿ ಭುವನೇಶ್ವರಿ ಪ್ರತಿಮೆ ಅನಾವರಣದ ಬಳಿಕ ಕನ್ನಡ ಗೀತೆಗಳ ಕಾರ್ಯಕ್ರಮ ಮತ್ತು ಹೊನ್ನ ಬಿತ್ತೇವು ನೃತ್ಯ ರೂಪಕ ಕಾರ್ಯಕ್ರಮ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ ಎಂದು ಶಿವರಾಜ ತಂಗಡಗಿ ವಿವರಿಸಿದರು.

ಸಾರಿಗೆ ಬಸ್‌ನಲ್ಲಿ ಕನ್ನಡದ ಧ್ವಜ

ಸ್ಥಳೀಯ ಬಿಬಿಎಂಪಿಯನ್ನು ಮೆರವಣಿಗೆಗೆ ಬಳಸಿಕೊಳ್ಳಲಾಗಿದ್ದು ಅಂದು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕನ್ನಡದ ಧ್ವಜ ಹಾರಾಡಲಿದೆ. ಉಚಿತವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡದ ಧ್ವಜವನ್ನು ವಿತರಿಸಲಾಗುವುದು ಎಂದು ಶಿವರಾಜ ತಂಗಡಗಿ ತಿಳಿಸಿದರು.

ಪ್ರತಿಮೆಯ ವೈಶಿಷ್ಟ್ಯತೆ

* ನೆಲಮಟ್ಟದಿಂದ ಪ್ರತಿಮೆಯ ಎತ್ತರ- 43.6 ಅಡಿ

* ಪ್ರತಿಮೆಯ ಲೋಹದ ಒಟ್ಟು ತೂಕ- 31.50 ಟನ್

* ಭುವನೇಶ್ವರಿ ಪ್ರತಿಮೆ- 20 ಟನ್

* ಕರ್ನಾಟಕ ನಕ್ಷೆ- 11.50 ಟನ್

* ಭುವನೇಶ್ವರಿ ಪ್ರತಿಮೆಯ ಒಟ್ಟು ವಿಸ್ತೀರ್ಣ (ಉದ್ಯಾನವನ ಸೇರಿದಂತೆ)- 4500 ಚ.ಮೀ

* ಕಲ್ಲು ಕಟ್ಟಡದ ಪೀಠದ ವಿವರ: ಕಲ್ಲಿನ ಹೊಯ್ಸಳ ಶೈಲಿಯ ಪೀಠ ಮತ್ತು ಪ್ರದಕ್ಷಣ ಪಥದ ಸುತ್ತ ಕರ್ಣಕೂಟ ಮತ್ತು ಅಲಂಕಾರಿಕ ಕಲ್ಲಿನ ಕೈಪಿಡಿ ನಿರ್ಮಾಣ.

* ಕಾಮಗಾರಿಯ ಅಂದಾಜು ವೆಚ್ಚ : 21.24 ಕೋಟಿ ರೂ.