ಬೆಂಗಳೂರು: ರಾಜ್ಯ ಭೋವಿ ಅಭಿವೃದ್ಧಿ ನಿಗಮ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ನಿಗಮದ ಮಾಜಿ ಎಂಡಿ ಆರ್. ಲೀಲಾವತಿಯನ್ನು ಬಂಧಿಸಿದ್ದಾರೆ.
ನಕಲಿ ಲಾನುಭವಿಗಳನ್ನು ಸೃಷ್ಟಿಸಿ ಆಪ್ತರು, ಸಂಬಂಧಿಕರ ಬ್ಯಾಂಕ್ ಖಾತೆಗೆ 90 ಕೋಟಿ ರೂ. ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಲಾಗಿತ್ತು. ಈ ಸಂಬಂಧ ಸಿಐಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ ಸೇರ್ಪಡೆ ಮಾಡಿದ ಸಿಐಡಿ ಅಧಿಕಾರಿಗಳು, ವಿಚಾರಣೆ ಸಲುವಾಗಿ ನಿಗಮದ ಮಾಜಿ ಎಂಡಿ ಆರ್. ಲೀಲಾವತಿಗೆ ನೋಟಿಸ್ ಜಾರಿ ಮಾಡಿದ್ದರು. ಶನಿವಾರ ತನಿಖಾಧಿಕಾರಿಗಳ ಮುಂದೆ ಹಾಜರಾದ ಮೇಲೆ ಲೀಲಾವತಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇವರು ನಿಗಮದ ಎಂಡಿ ಆಗಿದ್ದಾಗ ತಮ್ಮ ಸಹೋದರಿ ಮಂಗಳ ರಾಮು ಬ್ಯಾಂಕ್ ಖಾತೆಗೆ 1.48 ಕೋಟಿ ರೂ. ವರ್ಗಾವಣೆ ಮಾಡಿಕೊಂಡು ಭ್ರಷ್ಟಾಚಾರ ಎಸಗಿದ್ದರು. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ದಾಖಲೆ ನಾಶದ ಆರೋಪದ ಮೇಲೆ ಮಾಜಿ ಅಧೀಕ್ಷಕ ಪಿ.ಡಿ. ಸುಬ್ಬಪ್ಪ ಎಂಬಾತನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಲೀಲಾವತಿಯನ್ನು ಬಂಧಿಸಿದ್ದಾರೆ. ಭೋವಿ ಸಮುದಾಯದ ಸಮಗ್ರಹ ಅಭಿವೃದ್ಧಿಗಾಗಿ ಸರ್ಕಾರ ಸ್ಥಾಪಿಸಿದ ಭೋವಿ ಅಭಿವೃದ್ಧಿ ನಿಗಮದಲ್ಲಿ ಸ್ವಯಂ ಉದ್ಯೋಗಕ್ಕೆ ನೇರಸಾಲ ಯೋಜನೆ, ಉದ್ಯಮ ಶೀಲ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಗಂಗಾ ಕಲ್ಯಾಣ ಯೋಜನೆ ಮತ್ತು ಭೂ ಒಡೆತನ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ. ಆದರೆ, 2021-22 ಮತ್ತು 2022-23ನೇ ಸಾಲಿನ ಪ್ರಥಮ ತ್ರೈ ಮಾಸಿಕ (ಜೂನ್ ವರೆಗೆ) ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ, ಸಿಬ್ಬಂದಿ ಹಣಕಾಸು ದುರ್ಬಳಕ್ಕೆ ಮಾಡಿಕೊಂಡಿದ್ದರು. ಆಂತರಿಕ ಲೆಕ್ಕ ಪರಿಶೋಧನೆ ವರದಿ ಪ್ರಕಾರ 59.68 ಕೋಟಿ ರೂ. ದುರ್ಬಳಕ್ಕೆ ಆಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದ್ದು, 90 ಕೋಟಿ ರೂಪಾಯಿಗೆ ಏರಿಕೆಯಾಗಿದೆ.