ಶಿವಮೊಗ್ಗ: ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲು ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಭೋವಿ ಸಮಾಜದವರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಜಾತಿ ಕಾಲಂನಲ್ಲಿ ತಮ್ಮ ಮೂಲ ಜಾತಿ ಭೋವಿ ಅಥವಾ ವಡ್ಡರ ಎಂದೇ ನಮೂದಿಸುವಂತೆ ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ತಿಳಿಸಿದ್ದಾರೆ.
ಯಾವುದೇ ನೆಪ ಹೇಳಿ ತಪ್ಪಿಸಿಕೊಳ್ಳದೆ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಒಳ ಮೀಸಲು ಹಂಚಿಕೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಜಾತಿ ಗಣತಿ ಭೋವಿ ಸಮಾಜಕ್ಕೆ ಅತ್ಯಂತ ಮುಖ್ಯ. ಈ ಸಮೀಕ್ಷೆಯಲ್ಲಿನ ಜಾತಿವಾರು ಅಂಕಿ-ಅಂಶಗಳು ನಮ್ಮ ಸಮಾಜದ ಭವಿಷ್ಯವನ್ನು ನಿರ್ಧಾರ ಮಾಡಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಾತಿವಾರು ಜನಸಂಖ್ಯೆ ಆಧಾರದ ಮೇಲೆಯೇ ಒಳ ಮೀಸಲು ಹಂಚಿಕೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಸಮಾಜದ ಜನರನ್ನು ಸಮೀಕ್ಷೆ ಕಾರ್ಯದಿಂದ ಹೊರಗುಳಿಯದಂತೆ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಮೀಕ್ಷೆಗೆ ನಿಯೋಜಿತವಾದ ಸಿಬ್ಬಂದಿ ಆಧಾರ್ , ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರ ಕೇಳುತ್ತಿದ್ದಾರೆ ಎಂಬ ದೂರುಗಳು ಬರುತ್ತಿವೆ. ಸಮೀಕ್ಷೆದಾರರು ಜಾತಿವಾರು ದತ್ತಾಂಶಗಳನ್ನು ದಾಖಲು ಮಾಡಿಕೊಳ್ಳಬೇಕೆ ಹೊರತು ಬೇರೆ ಮಾಹಿತಿ ಕೇಳುವಂತಿಲ್ಲ ಎಂದು ಹೆಳಿದರು.
ಜಿಪಂ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರಿ ಮಾತನಾಡಿ, ಭೋವಿ ಎನ್ನುವ ಪದದಲ್ಲೇ ಸಣ್ಣ ಪುಟ್ಟ ವ್ಯತ್ಯಾಸ ಮಾಡಿಕೊಂಡು ಅನ್ಯ ಜಾತಿಯವರು ಸರ್ಕಾರಿ ಸೌಲಭ್ಯ ಪಡೆದ ನಿದರ್ಶನಗಳಿವೆ. ಕೆಲ ಪ್ರಕರಣಗಳು ನ್ಯಾಯಾಲಯದ ಹಂತಕ್ಕೂ ಹೋಗಿವೆ. ಹೀಗಾಗಿ ಸಮೀಕ್ಷೆ ವೇಳೆ ಸಮಾಜದ ಜನರು ಭೋವಿ ಎನ್ನುವ ಪದವನ್ನು ಸರಿಯಾಗಿ ನಮೂದಿಸಬೇಕು ಎಂದರು.
ಭೋವಿ ಸಮಾಜದ ಪ್ರಮುಖರಾದ ಕೆ.ಹರ್ಷ ಭೋವಿ, ವಿರೇಶ್ ಕ್ಯಾತಿನಕೊಪ್ಪ, ಚಂದ್ರಪ್ಪ ಕಲ್ಲಗಂಗೂರು, ಗಣೇಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.