ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಶ್ರೀನಿವಾಸ್ ರಾವ್ ಪಿಸ್ಸೆ 
ನ್ಯೂಸ್

ಗಣತಿಯಲ್ಲಿ ಭಾವಸಾರ ಸಮುದಾಯ ಕಡೆಗಣನೆ

ನವೀನ ಬಿ.ಎಂ

ಶಿವಮೊಗ್ಗ: ಜಾತಿ ಗಣತಿ ವರದಿಯಲ್ಲಿ ಭಾವಸಾರ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ಕೂಡಲೇ ಮತ್ತೊಮ್ಮೆ ಜಾತಿ ಜನಗಣತಿಯನ್ನು ನಡೆಸಬೇಕು ಎಂದು ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಶ್ರೀನಿವಾಸ್ ರಾವ್ ಪಿಸ್ಸೆ ಹೇಳಿದರು.

ನಮ್ಮ ಜನಾಂಗ ಮಾತೃಭಾಷೆಯನ್ನು ಮರಾಠಿಯಾಗಿ ಬಳಸುತ್ತದೆ. ಜಾತಿ ಜನಗಣತಿ ಸಂದರ್ಭದಲ್ಲಿ ಭಾಷೆ ಆಧಾರದ ಮೇಲೆ ನಮ್ಮನ್ನು ಮರಾಠರೆಂದು ನಮೂದಿಸಿಕೊಂಡಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ. ನಿಯಮಬದ್ಧವಾಗಿ 2ಎ ಮೀಸಲಾತಿ ಇದೆ. ಆದರೆ ಜಾತಿ ಜನಗಣತಿಯಲ್ಲಾದ ತಪ್ಪಿನಿಂದ ಮರಾಠರ 3ಸಿ ಮೀಸಲಾತಿ ಸಿಗುವಂತಾಗಿದೆ. ಆದ್ದರಿಂದ ಕೂಡಲೇ ಪುನಃ ಜಾತಿ ಜನಗಣತಿ ನಡೆಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದಲ್ಲಿ 8ರಿಂದ 10 ಲಕ್ಷ ಜನಸಂಖ್ಯೆ ಇದ್ದೇವೆ. ನಮ್ಮಲ್ಲಿ 33 ಉಪ ಪಂಗಡಗಳಿವೆ. ದೊಡ್ಡ ಮಟ್ಟದಲ್ಲಿ ಜನಸಂಖ್ಯೆ ಇದ್ದರೂ ನಮಗೆ ಅನ್ಯಾಯವಾಗಿದೆ. ಈಗ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಕೂಡಲೇ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಮಹಾಸಭಾದ ಹಿರಿಯ ಉಪಾಧ್ಯಕ್ಷ ಸತ್ಯನಾರಾಯಣರಾವ್ ಅಂಬರ್ಕರ್, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಸುಲಖೆ, ಮುಖಂಡರಾದ ಕಿರಣ್ ಕಾಕಡೆ, ಅನಂತ್‌ಕುಮಾರ್ ಖಾಟೋಕರ್, ಮಹದೇವರಾವ್ ವರ್ಣೆ, ಗಜೇಂದ್ರನಾಥ್ ಮಾಳೋದೆ, ಬಿ. ಸುರೇಶ್ ಕುಮಾರ್, ಮೋಹನ್‌ಕೃಷ್ಣ ಸುದ್ದಿಗೋಷ್ಠಿಯಲ್ಲಿದ್ದರು.