ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರಿನ ಮಧ್ಯಭಾಗದಲ್ಲಿರುವ ಪ್ರಸಿದ್ಧ ಧಾರ್ವಿುಕ ಸ್ಥಳ ಭೀಮನಕೊಲ್ಲಿ ಮಲೈ ಮಹದೇಶ್ವರ ದೇವಸ್ಥಾನಕ್ಕೆ ಮಂಗಳವಾರ ಕಾಂಗ್ರೆಸ್ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಶಾಸಕ ಅನಿಲ್ ಚಿಕ್ಕಮಾದು ಇತರರಿದ್ದರು. 
ನ್ಯೂಸ್

ರಾಜಕೀಯ ಪ್ರಹಸನ, ಎಲೆಕ್ಷನ್​ನತ್ತ ಗಮನ: ಕಾಂಗ್ರೆಸ್​ನ ಭಾರತ್ ಜೋಡೋ ಇಂದು ಮತ್ತೆ ಶುರು

ಬೆಂಗಳೂರು: ವಿಜಯದಶಮಿ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಗರಿಗೆದರಿದ್ದು, ಶುಕ್ರವಾರ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಹಲವು ಕಾರ್ಯತಂತ್ರಗಳನ್ನು ರೂಪಿಸಲಿದ್ದರೆ, ಇತ್ತ ಎರಡು ದಿನ ವಿರಾಮ ನೀಡಿದ್ದ ಭಾರತ್ ಜೋಡೋ ಪಾದಯಾತ್ರೆಯನ್ನು ಕಾಂಗ್ರೆಸ್ ಮತ್ತೆ ಗುರುವಾರ ಆರಂಭಿಸುತ್ತಿದೆ. ಯಾತ್ರೆಗೆ ಸೋನಿಯಾ ಗಾಂಧಿ ಜತೆಯಾಗುವ ಮೂಲಕ ಇನ್ನಷ್ಟು ಉತ್ಸಾಹ ತುಂಬಲಿದ್ದಾರೆ. ರಾಹುಲ್​ಗೆ ಸೋನಿಯಾ ಸಾಥ್ ನೀಡಲಿದ್ದಾರೆ. ಭಾರತ್ ಜೋಡೋ ಯಾತ್ರೆ ಎರಡು ದಿನಗಳ ವಿರಾಮದ ಬಳಿಕ ಗುರುವಾರದಿಂದ ಮುಂದುವರಿಯಲಿದ್ದು, ಯಾತ್ರೆಗೆ ಇನ್ನಷ್ಟು ಮಹತ್ವ ತಂದುಕೊಡಲು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಪುತ್ರ ರಾಹುಲ್​ರೊಂದಿಗೆ ಹೆಜ್ಜೆ ಹಾಕಲಿದ್ದಾರೆ.

ಅನಾರೋಗ್ಯದಿಂದ ವಿದೇಶದಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ಸೋನಿಯಾ ಬಹು ದಿನಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬೆಳಗ್ಗೆ 6.30ಕ್ಕೆ ಮಂಡ್ಯ ಜಿಲ್ಲೆಯ ಪಾಂಡವಪುರದ ಮಹದೇಶ್ವರ ದೇವಸ್ಥಾನದಿಂದ ಯಾತ್ರೆ ಪ್ರಾರಂಭವಾಗಿ, 20 ಕಿಮೀ ಸಂಚರಿಸಲಿದೆ. ಈ ವೇಳೆ ಮಾರ್ಗಮಧ್ಯದಲ್ಲಿ ಬೆಳಗ್ಗೆ 8.30ಕ್ಕೆ ಸೋನಿಯಾಗಾಂಧಿ ಯಾತ್ರೆಯನ್ನು ಕೂಡಿಕೊಳ್ಳಲಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಕೂಡ ಸೋನಿಯಾ ಗಾಂಧಿಯವರೊಟ್ಟಿಗೆ ಸಾಂಕೇತಿಕವಾಗಿ ಕೆಲ ದೂರ ಸಾಗಲಿದ್ದಾರೆ.

ಶುಕ್ರವಾರ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ವಿಚಾರ ಪ್ರಸ್ತಾಪಿಸಲಿದ್ದಾರೆ. ಪ್ರಮುಖವಾಗಿ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ, ನೇಮಕ ಅಕ್ರಮದ ಬಗ್ಗೆ ಮಾಹಿತಿ ಹಂಚಿಕೊಳ್ಳುವರು. ಶನಿವಾರ ಪ್ರಿಯಾಂಕಾ ವಾದ್ರಾ ರಾಜ್ಯ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದ್ದು, ಅಂತಿಮ ಒಪ್ಪಿಗೆಗಾಗಿ ಕಾಯಲಾಗುತ್ತಿದೆ. ಅವರು ತುಮಕೂರು ಅಥವಾ ಚಿತ್ರದುರ್ಗ ಜಿಲ್ಲೆಯಲ್ಲಿ ಯಾತ್ರೆ ಸಾಗುವಾಗ ಪಾಲ್ಗೊಳ್ಳುವ ನಿರೀಕ್ಷೆ ಕೂಡ ಕೆಪಿಸಿಸಿಗಿದೆ.

ಮುಂದಿನ ಚಟುವಟಿಕೆಗಳು: ಮಂಡ್ಯದಲ್ಲಿ ರೈತರ ಜತೆ ಸಂವಾದ, ತುಮಕೂರು ಜಿಲ್ಲೆಯ ತೆಂಗು ಬೆಳಗಾರರ ಸಮಸ್ಯೆ ಆಲಿಕೆ, ಬೀಡಿ ಕಾರ್ವಿುಕರು, ಬಂಜಾರ ಸಮು ದಾಯದ ಜತೆ ಸಂವಾದ, ಬಾಲ ಮಂಚ್​ನ ಮಕ್ಕಳ ಜತೆಗೆ ರಾಹುಲ್ ಗಾಂಧಿ ಸಮಯ ಕಳೆಯಲಿದ್ದಾರೆ. ಅ.15ರಂದು ಯಾತ್ರೆ ಅಂಗವಾಗಿ ಬಳ್ಳಾರಿಯಲ್ಲಿ ದೊಡ್ಡ ಸಮಾವೇಶ ನಡೆಸಲು ತಯಾರಿ ನಡೆದಿದೆ.

ಆನೆ ಮರಿ ಚಿಕಿತ್ಸೆಗೆ ರಾಹುಲ್ ಪತ್ರ: ನಾಗರಹೊಳೆಯಲ್ಲಿ ಗಾಯಗೊಂಡಿರುವ ಆನೆಮರಿಗೆ ತುರ್ತಾಗಿ ಚಿಕಿತ್ಸೆ ಕೊಡಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಿಎಂ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ. ತಮ್ಮ ತಾಯಿಯವರೊಂದಿಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ, ಗಾಯಗೊಂಡ ಆನೆಮರಿಯ ಕಂಡೆವು. ಅದರ ಬಾಲ ಮತ್ತು ಸೊಂಡಿಲಿಗೆ ತೀವ್ರ ಗಾಯವಾಗಿದ್ದು, ಜೀವ ಉಳಿಸಿಕೊಳ್ಳಲು ಹೋರಾಡುತ್ತಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಆ ಆನೆ ಮರಿಗೆ ತುರ್ತಾದ ಚಿಕಿತ್ಸೆ ಅಗತ್ಯವಾಗಿದೆ. ಕೂಡಲೇ ಮಧ್ಯ ಪ್ರವೇಶಿಸಿ ಮರಿಯಾನೆ ರಕ್ಷಿಸಲು ಕ್ರಮಕೈಗೊಳ್ಳಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.

ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಸಾಗುತ್ತಿದ್ದು, ಸಮಾಜದ ಎಲ್ಲ ವರ್ಗದವರೂ ಸ್ವಯಂ ಪ್ರೇರಿತವಾಗಿ ಸ್ವಾಗತ ಮಾಡುತ್ತಿದ್ದಾರೆ. ಮುಂದಿನ ಅವಧಿಯಲ್ಲಿ ಸಮಾಜದಲ್ಲಿ ಸಂಕಷ್ಟಕ್ಕೊಳಗಾದವರ ಜತೆ ಸಂವಾದ ನಡೆಸಿ, ಅವರ ದನಿಯಾಗಲಿದೆ. | ಸಲೀಂ ಅಹ್ಮದ್ ಭಾರತ ಜೋಡೋ ರಾಷ್ಟ್ರೀಯ ಸಮಿತಿ ಸದಸ್ಯ

ಮತ್ತೆ ಕಮಲಪಡೆ ಸವಾರಿ: ಡಬಲ್ ಇಂಜಿನ್ ಸರ್ಕಾರದ ಸಾಧನೆ, ಜನಪರ ಕಾರ್ಯಕ್ರಮಗಳ ಜನರಿಗೆ ತಿಳಿಸಲು ಉದ್ದೇಶಿತ ಪ್ರಚಾರದ ಬೆನ್ನೇರಿ ಮತ್ತೆ ಸವಾರಿ ಮಾಡಲು ಕಮಲಪಡೆ ಉತ್ಸುಕವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ (ಅ.7) ನಿಗದಿಯಾಗಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಮಹತ್ವ ಪಡೆದುಕೊಂಡಿದೆ. ಪ್ರತಿಪಕ್ಷ ಕಾಂಗ್ರೆಸ್​ನ ರಣೋತ್ಸಾಹಕ್ಕೆ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ’ ಯಾತ್ರೆ ಹುರಿದುಂಬಿಸಿದ್ದು, ಕೈನಾಯಕರು ತೀವ್ರ ವಾಗ್ದಾಳಿಗೆ ಇಳಿದಿದ್ದಾರೆ. ವಿಧಾನಸಭೆ ಚುನಾವಣೆಗೆ ಜೆಡಿಎಸ್ 123 ಸ್ಥಾನಗಳ ಗಳಿಕೆ ಗುರಿಯಿಟ್ಟುಕೊಂಡು, ವಿವಿಧ ಹಂತದ ಸಭೆಗಳು ಹಾಗೂ ನಿರ್ದಿಷ್ಟ ಕಾರ್ಯಸೂಚಿಯನ್ನು ಗೊತ್ತುಪಡಿಸಿದೆ. ರಾಷ್ಟ್ರ ರಾಜಕಾರಣದಲ್ಲೂ ಮಹತ್ವದ ಪಾಲುಗಾರಿಕೆಯಿರಲೆಂದು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್​ರಾವ್ ಪ್ರಯತ್ನಗಳಿಗೂ ಸಾಥ್ ನೀಡಿದೆ. ಪ್ರತ್ಯಸ್ತ್ರ ತಯಾರಿ: ಗುರಿ ನಿಗದಿ, ಕಾರ್ಯಯೋಜನೆ ರೂಪಿಸುವಲ್ಲಿ ಆಡಳಿತ ಬಿಜೆಪಿ ಮುಂದಿತ್ತು. ಆದರೆ ರೂಪಿಸಿದ ಅಸ್ತ್ರಗಳ ಪ್ರಯೋಗದಲ್ಲಿ ಹಿಂದೆ ಬಿದ್ದು, ಪ್ರತಿಪಕ್ಷಗಳೆರಡೂ ಸಾಕಷ್ಟು ಮುಂದೆ ಸಾಗಿವೆ. ಎದುರಾಳಿಗಳ ರಣತಂತ್ರಕ್ಕೆ ಬೇಕಾದ ಪ್ರತ್ಯಸ್ತ್ರಗಳ ಚಿಂತನೆ ನಡೆಸಿದೆ. ಜನ-ಸಾಮಾನ್ಯರ ಬದಲಾದ ಪರಿಸ್ಥಿತಿ, ಮನಸ್ಥಿತಿಗೆ ತಕ್ಕ ತಯಾರಿಗೆ ಮುಂದಾಗಿದೆ. ಜನರ ಮುಂದೆ ವರದಿ ಮಂಡನೆ, ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸಲು ಮೂರು ತಿಂಗಳಷ್ಟೇ ಉಳಿದಿವೆ ಎಂದು ಮೂಲಗಳು ಹೇಳಿವೆ.

ಜೋಡೋಗೆ ಆರೋಗ್ಯ ಸಚಿವ ಸುಧಾಕರ್ ತಿವಿತ

  • ಕಾಶ್ಮೀರದಲ್ಲಿ ಹಿಂದುಗಳ ಮಾರಣ ಹೋಮ ನಡೆದಾಗ ನೆನಪಾಗಲಿಲ್ಲ, ಮುಂಬಯಿ ಮೇಲೆ ಉಗ್ರರ ದಾಳಿ, ಬೋಧ ಗಯಾದಲ್ಲಿ ಭಯೋತ್ಪಾದಕ ದಾಳಿ ನಡೆದಾಗ ಸಹಭಾಳ್ವೆಯ ನೆನಪಾಗಲಿಲ್ಲ, ಕರ್ನಾಟಕದಲ್ಲಿ ಹಿಂದು ಕಾರ್ಯಕರ್ತರ ಸರಣಿ ನಡೆದಾಗ ಶಾಂತಿ ಮಂತ್ರದ ಸ್ಮರಣೆ ಬರಲಿಲ್ಲ. ಈಗ ಮರಳಿ ಅಧಿಕಾರ ಗಳಿಸುವುದಕ್ಕಾಗಿ ಇಷ್ಟೊಂದು ನಾಟಕವೇ?
  • ದೇಶ ವಿಭಜನೆ, ಕಾಶ್ಮೀರ ವಿಭಜನೆ, ಎಮರ್ಜೆನ್ಸಿ ಹೇರಿಕೆ, ಬೋಫೋರ್ಸ್ ಹಗರಣ, 2ಜಿ ಹಗರಣ ಇದೆಲ್ಲವೂ ಕಾಂಗ್ರೆಸ್ ನಡೆಸಿದ ವಿಭಜಕ ಆಡಳಿತದ ಫಲಶೃತಿ. ಇದಲ್ಲದರ ಸಾಕ್ಷಿ ಪ್ರಜ್ಞೆಯೇ ರಾಹುಲ್ ಗಾಂಧಿ. ಇನ್ನೇನು ಉಳಿಸಿದ್ದೀರಿ ಜೋಡಿಸುವುದಕ್ಕೆ?
  • ಗೊತ್ತು- ಗುರಿ ಎರಡೂ ಇಲ್ಲದ ಈ ನಡಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ವನ್ನು ನಿಂದಿಸುವ ಏಕಮಾತ್ರ ಉದ್ದೇಶ ಹೊಂದಿರುವುದು ವಿಪರ್ಯಾಸ.