ನ್ಯೂಸ್

ಕಾಶಿ ದರ್ಶನ ಯಾತ್ರೆಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಪಂಕಜ ಕೆ.ಎಂ.

ಬೆಂಗಳೂರು: ರಾಜ್ಯ ಮುಜರಾಯಿ ಇಲಾಖೆ ಆರಂಭಿಸಿರುವ ‘ಕರ್ನಾಟಕ-ಭಾರತ್ ಗೌರವ್ ಕಾಶಿ ರೈಲು ಯಾತ್ರೆ’ 6ನೇ ಸುತ್ತಿನ ಪ್ರವಾಸಕ್ಕೆ ಶನಿವಾರ ಚಾಲನೆ ದೊರೆತಿದ್ದು, ಈ ಬಾರಿ ಬೆಂಗಳೂರಿನಿಂದ ಕಾಶಿಗೆ ತೆರಳಿದ ರೈಲಿನಲ್ಲಿ ಎಲ್ಲ 650 ಸೀಟುಗಳು ಭರ್ತಿಯಾಗಿದ್ದವು.

ನಗರದ ಯಶವಂತಪುರ ರೈಲು ನಿಲ್ದಾಣದಿಂದ ಹೊರಟ ವಿಶೇಷ ರೈಲಿಗೆ ಸಚಿವ ರಾಮಲಿಂಗಾರೆಡ್ಡಿ ಹಸಿರು ನಿಶಾನೆ ತೋರಿಸಿದರು. ಎರಡು ದಿನಗಳ ಪ್ರಯಾಣದ ನಂತರ ಸೆ.25ರಂದು ರೈಲು ವಾರಣಾಸಿ ತಲುಪಲಿದೆ. 27ರಂದು ಪ್ರಯಾಗ್‌ರಾಜ್‌ಗೆ ಪ್ರಯಾಣ ಬೆಳೆಸಲಿದೆ. 28ರಂದು ಅಯೋಧ್ಯಾ, 29ರಂದು ಗಯಾಕ್ಕೆ ಭೇಟಿ ನೀಡಲಿದ್ದು, ಅ.2ಕ್ಕೆ ಬೆಂಗಳೂರಿಗೆ ರೈಲು ಮರಳಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಜರಾಯಿ ಇಲಾಖೆಯ ಈ ಮಹಾತ್ವಾಕಾಂಕ್ಷಿ ಧಾರ್ಮಿಕ ಯಾತ್ರೆಗೆ ಕಳೆದ ನ.11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ‘ದಿವ್ಯ ಕಾಶಿ-ಭವ್ಯ ಕಾಶಿ’ಯ ಶೀರ್ಷಿಕೆಯಡಿ ಈಗಾಗಲೆ ಆರು ಸುತ್ತಿನ ಪ್ರವಾಸ ಪೂರ್ಣಗೊಳಿಸಲಾಗಿದೆ. ಈ ಮೊದಲು ಯೋಜನೆಯಡಿ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್ ಕ್ಷೇತ್ರಗಳಿಗೆ ಮಾತ್ರ ಯಾತ್ರೆ ಕರೆದೊಯ್ಯಲಾಗುತ್ತಿತ್ತು. ಇದೀಗ ಬಿಹಾರದ ಗಯಾ ಕ್ಷೇತ್ರವನ್ನು ಸೇರಿಸಿರುವ ರಾಜ್ಯ ಸರ್ಕಾರ, ಯಾತ್ರೆಗೆ ನೀಡುತ್ತಿದ್ದ ಸಹಾಯಧನವನ್ನು 5 ಸಾವಿರದಿಂದ 7,500 ರೂ.ಗೆ ಏರಿಸಿದೆ.

8ನೇ ಸುತ್ತಿಗೆ ಟಿಕೆಟ್ ಬುಕ್ಕಿಂಗ್ ಪೂರ್ಣ:

ಅ.7ರಂದು ಏಳನೇ ಸುತ್ತಿನ ಕಾಶಿ ಯಾತ್ರೆ ಆರಂಭವಾಗಲಿದ್ದು, ಈಗಾಗಲೆ ಎಲ್ಲ ಸೀಟುಗಳ ಟಿಕೆಟ್ ಬುಕ್ಕಿಂಗ್ ಪೂರ್ಣಗೊಂಡಿವೆ. ಹಾಗಾಗಿ ಉಳಿದವರು ಅ.26ಕ್ಕೆ ಆರಂಭವಾಗಲಿರುವ ಪ್ರವಾಸಕ್ಕೆ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಯಾತ್ರೆಯಲ್ಲಿ ಗಯಾ ಕ್ಷೇತ್ರ ಸೇರ್ಪಡೆ ನಂತರ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ರೈಲು ವ್ಯವಸ್ಥೆ:

ಕಾಶಿಯಾತ್ರೆ ಮಾಡುವವರಿಗಾಗಿಯೇ ಕರ್ನಾಟಕ ಸರ್ಕಾರ 14 ಬೋಗಿಗಳುಳ್ಳ ವಿಶೇಷ ರೈಲನ್ನು ವಿನ್ಯಾಸಗೊಳಿಸಿದ್ದು, ಇದರಲ್ಲಿ ಏಕಕಾಲದಲ್ಲಿ 650 ಮಂದಿ ಯಾತ್ರಾರ್ಥಿಗಳು ಪ್ರಯಾಣ ಮಾಡಬಹುದಾಗಿದೆ. ಇದು 9 ದಿನಗಳ ಧಾರ್ಮಿಕ ಪ್ರವಾಸವಾಗಿದ್ದು, ವ್ಯಕ್ತಿಯೊಬ್ಬರಿಗೆ 22,500 ರೂ. ದರ ನಿಗದಿಪಡಿಸಲಾಗಿದೆ. ಇದರಲ್ಲಿ 7,500 ರೂ. ಸರಕಾರವೇ ನೀಡುತ್ತದೆ. ಈಗಾಗಲೆ ಐದು ಸುತ್ತಿನಲ್ಲಿ 2000ಕ್ಕೂ ಅಧಿಕ ಮಂದಿ ಪ್ರವಾಸ ಮಾಡಿಬಂದಿದ್ದಾರೆ.