ನ್ಯೂಸ್

ದೆಹಲಿ ಸಿಎಂ ಕೇಜ್ರಿವಾಲ್​ಗೆ ಗೃಹಬಂಧನ: ಪೊಲೀಸರ ವಿರುದ್ಧ ಆಪ್​ ನಾಯಕರ ಆಕ್ರೋಶ

ನವದೆಹಲಿ: ಸೋಮವಾರ ರೈತರನ್ನು ಭೇಟಿ ಮಾಡಿ ಬಂದಾಗಿನಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಗೃಹ ಬಂಧನದಲ್ಲಿ ಇಡಲಾಗಿದ್ದು, ಮತ್ತೆ ರೈತರನ್ನು ಭೇಟಿ ಮಾಡದಂತೆ ಬಲವಂತವಾಗಿ ಹಿಡಿದಿಡಲಾಗಿದೆ ಎಂದು ಆಡಳಿತಾರೂಢ ಆಮ್​ ಆದ್ಮಿ ಪಕ್ಷ ಆರೋಪಿಸಿದ್ದು, ದೆಹಲಿ ಪೊಲೀಸರು ಆರೋಪವನ್ನು ಅಲ್ಲಗೆಳೆದಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಭಾರತ್​ ಬಂದ್​ಗೆ ಕರೆ ನೀಡಿದ್ದು, ಉದ್ದೇಶಪೂರ್ವಕವಾಗಿಯೇ ಮುಖ್ಯಮಂತ್ರಿ ಕೇಜ್ರಿವಾಲ್​ರನ್ನು ಬಂಧಿಸಿಡಲಾಗಿದೆ ಎಂದು ಆಪ್​ ಆರೋಪಿಸಿದೆ.

ಕೇಂದ್ರ ಗೃಹ ಸಚಿವಾಲಯ ನೀಡಿರುವ ಆದೇಶದ ಮೇರೆಗೆ ದೆಹಲಿ ಪೊಲೀಸರು ನಗರದ ಮೂವರು ಮೇಯರ್​ಗಳು ಕರೆತಂದು ಮುಖ್ಯಮಂತ್ರಿ ನಿವಾಸದ ಮುಂದೆ ಧರಣಿ ಮಾಡಿಸಿ, ಅದೇ ಸಮಯದಲ್ಲಿ ಸಿಎಂ ನಿವಾಸ ನಿರ್ಗಮನ ದ್ವಾರಗಳನ್ನು ಮುಚ್ಚಿ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ಸಿಎಂ ನಿವಾಸ ಸಂಪೂರ್ಣ ಬ್ಯಾರಿಕೇಡ್​ಗಳಿಂದ ಸುತ್ತುವರಿದಿದ್ದು, ಮನೆಯ ಆವರಣದ ಒಳಗೆ ಯಾರು ಪ್ರವೇಶದಂತೆ ನಿರ್ಭಂದಿಸಲಾಗಿದೆ ಎಂದು ಆಪ್​ ಆರೋಪಿಸಿದೆ.

ಸಿಎಂ ನಿರ್ಬಂಧದಿಂದಾಗಿ ಇಂದಿನ ಎಲ್ಲ ಅಧಿಕೃತ ಸಭೆಗಳು ರದ್ದಾಗಿವೆ ಎಂದು ಆಪ್​ ನಾಯಕರು ಆರೋಪಿಸಿದರೆ, ಆಪ್​ ಮಾಡುತ್ತಿರುವ ಆರೋಪ ಆಧಾರರಹಿತ ಮತ್ತು ಸುಳ್ಳುಗಳಿಂದ ಕೂಡಿದೆ. ಸಿಎಂ ಮನೆಯನ್ನು ನಿರ್ಬಂಧಿಸಲಾಗಿಲ್ಲ. ಎಲ್ಲವೂ ಆರಾಮಾಗಿ ಇದೆ ಎಂದು ದೆಹಲಿ ಪೊಲೀಸ್​ ಉಪ ಆಯುಕ್ತ ಅಂಟೋ ಅಲ್ಫೋನ್ಸ್​ ಆರೋಪವನ್ನು ಅಲ್ಲಗೆಳೆದಿದ್ದಾರೆ.

ನಿನ್ನೆಯಷ್ಟೇ ಕೇಜ್ರಿವಾಲ್​ ಅವರು ದೆಹಲಿ ಮತ್ತು ಹರಿಯಾಣ ನಡುವೆ ಇರುವ ಸಿಂಘು ಗಡಿಗೆ ಭೇಟಿ ನೀಡಿ ಪ್ರತಿಭಟನಾ ರೈತರನ್ನು ಮಾತನಾಡಿಸಿ, ಪ್ರತಿಭಟನೆ ಬೆಂಬಲ ವ್ಯಕ್ತಪಡಿಸಿದ್ದರು. ಇಂದು ಸಹ ಅವರು ರೈತರ ಭೇಟಿಗೆ ತೆರಳಬೇಕಿತ್ತು. ಇದರ ಬೆನ್ನಲ್ಲೇ ಆಪ್​ ಪಕ್ಷ ಗಂಭೀರ ಆರೋಪ ಮಾಡಿದೆ. (ಏಜೆನ್ಸೀಸ್​)