ಗಳು, ಆತ್ಮಕೋವಿದರು, ತತ್ವದರ್ಶಿಗಳು, ದಾರ್ಶನಿಕರು, ಸಂತ-ಮಹಾಂತರು, ಶರಣರು, ನಿಜಭಕ್ತಿಯನ್ನು ಸಾಧಿಸದೇ ಪೂರ್ಣಮುಕ್ತ ಸ್ಥಿತಿಯನ್ನು ಪಡೆಯಲಿಲ್ಲ. ಶಂಕರರವಾಣಿಯು ಮೋಕ್ಷ ಪಡೆಯುವ ಸಾಧನ ಸಾಮಗ್ರಿಗಳಲ್ಲಿ ಭಕ್ತಿಯೇ ಪ್ರಮುಖ ಸಾಧನೆ ಎಂದು ಹೇಳಿದ್ದಾರೆ.
ಭಕ್ತಿ-ಜ್ಞಾನ ಇವು ಒಂದೇ ಗಿಡದ ಬೇರು, ಹಣ್ಣು ಇದ್ದಂತೆ. ಪರಮಾತ್ಮನ ಪೂರ್ಣಜ್ಞಾನಕ್ಕಾಗಿ ಬಾಹ್ಯಪೂಜೆ, ವ್ರತನೇಮಗಳ ಸಾಧನೆ ಅವಶ್ಯ ಎಂದು ಶಿವಶರಣರು ಹೇಳಿದ್ದಾರೆ. ಮಾಡುವ ಭಕ್ತಿ ಸತ್ಯದಿಂದ ತುಂಬಿರಬೇಕು, ಆಡಂಬರದ ನಾಟಕವಾಗಬಾರದು. ‘ಮಾತಿನ ಮೂಲೆಯಲ್ಲಿಪ್ಪುದೇ ಭಕ್ತಿ? ಮಾಡಿ ತನು ಸವೆಯದನ್ನಕ್ಕರ? ಧನ ಸವೆಯದನ್ನಕ್ಕರ? ಮನ ಸವೆಯದನ್ನಕ್ಕರ? ಅಪ್ಪುದೇ ಭಕ್ತಿ?’ - ಹೀಗೆಂದು ಬಸವಣ್ಣನವರು ಪ್ರಶ್ನಿಸಿದ್ದಾರೆ.
ಸೇವೆ-ತ್ಯಾಗ-ದಾನ-ಜ್ಞಾನಗಳಿಲ್ಲದ ಭಕ್ತಿ, ಮುಡಿ ಇಲ್ಲದ ಸಿಂಗಾರದಂತೆ ವ್ಯರ್ಥವಾಗುತ್ತದೆ. ಬಾಯಿಮಾತಿನ ಭಕ್ತಿಗೆ ಭಗವಂತನೊಲಿಯುವನೇ? ಕಂಡ ಭಕ್ತರಿಗೆ ಕೈ ಮುಗಿಯುವಾತನೇ ಭಕ್ತ. ಮೃದುವಚನಂಗಳೇ ಜಪ, ತಪ, ಸದಾಶಿವನೊಲಿಸುವ ಸಾಧನಗಳೆಂದು ಅಣ್ಣನವರು ಹೇಳಿದ್ದಾರೆ. ಆದರೆ ಇಂದಿನ ಭಕ್ತರು ನಾವು ಈ ತತ್ವದವರು, ಅವರು ಆ ತತ್ವದವರು, ನಮ್ಮ ತತ್ವದೊಡ್ಡದು ಎಂದು ಹೇಳುತ್ತ, ತತ್ವದ ಹೆಸರಿನಲ್ಲಿ ಮುಖ ಮುಖ ನೋಡದಂತೆ ಮಾಡುತ್ತಿದ್ದಾರಲ್ಲ, ಇವರಾವ ಭಕ್ತರು? ಪ್ರಚಾರಕ್ಕೆ ತತ್ವ ಸಿಮೀತವಾಗಬಾರದು.
ಅದು ಅಂತಃಕರಣವನ್ನು ಅಂತಃಕರಣದ ಸಮೀಪ ತರಬೇಕು, ಭಾವ ಭಾವ ಸಮರಸಗೊಳ್ಳಬೇಕು. ಭಕ್ತಿಗೆ ಜಾತಿಗಳಿಲ್ಲ, ಪಂಚಮಹಾಭೂತಗಳಿಗೂ ಜಾತಿಗಳಿಲ್ಲ, ಜಗತ್ಕರ್ತೃವಾದ ಪರಮಾತ್ಮನಿಗೂ ಜಾತಿಯಿಲ್ಲ. ಮನುಷ್ಯರೇ ಸೃಷ್ಟಿಸಿಕೊಂಡ ಜಾತಿಸಂಕೋಲೆ ವಾಸ್ತವಿಕತೆಯನ್ನು ಬಿಗಿದುಕಟ್ಟುತ್ತಿದೆ. ಈ ಜಾತಿಯ ಕಪಿಮುಷ್ಟಿಯಿಂದ ಹೊರಬರದ ಹೊರತು, ಶರಣರ ವಚನಗಳು ಪ್ರಚಾರಕ್ಕೆ ವಿನಹ ಪಚನಕ್ಕೆ ಅಲ್ಲ.