ಗಂಜಾಂನಲ್ಲಿ ಜೀವನದಿ ಕಾವೇರಿ ತೀರದಲ್ಲಿರುವ ಶ್ರೀ ನಿಮಿಷಾಂಬ ದೇವಾಲಯ.  
ನ್ಯೂಸ್

ಭಕ್ತಿಗೆ ನಿಮಿಷದಲ್ಲಿ ಒಲಿಯುವ ನಿಮಿಷಾಂಬೆ

ಶ್ರೀರಂಗಪಟ್ಟಣ: ಭಕ್ತಿಯಿಂದ ದೇವಿ ಬಳಿ ಪ್ರಾರ್ಥಿಸಿ ಶರಣಾದರೆ ನಿಮಿಷ ಮಾತ್ರದಲ್ಲಿ ಕಷ್ಟಗಳನ್ನು ಪರಿಹರಿಸುವ ಪಾರ್ವತಿ ಸ್ವರೂಪಿಣಿ ಶ್ರೀಅಂಬಿಕೆ. ಈಕೆಯ ಪವಾಡಗಳ ಮಹಿಮೆ ಅರಿತು ಬಂದು ಪೂಜಿಸುವ ಕೋಟ್ಯಂತರ ಭಕ್ತರ ಶಕ್ತಿ ದೇವತೆಯೇ ಈಗಿನ ನಿಮಿಷಾಂಬಿಕೆ.

ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣ ಸಮೀಪದ ಗಂಜಾಂನ ಜೀವನದಿ ಕಾವೇರಿ ತಟದಲ್ಲಿ ವಾಸ್ತು ಪ್ರಕಾರದಲ್ಲಿ ನೆಲೆ ನಿಂತು ನಿತ್ಯವೂ ದೇಹಿ ಎಂದು ತನ್ನ ಸನ್ನಿಧಾನಕ್ಕೆ ಆಗಮಿಸುವ ಅಸಂಖ್ಯಾತ ಭಕ್ತರ ಕಷ್ಟಗಳನ್ನು ನಿಮಿಷ ಮಾತ್ರದಲ್ಲೇ ಪರಿಹರಿಸುವ ಮೂಲಕ ನಿಮಿಷಾಂಬೆ ಆಸ್ತಿಕರ ನೆಚ್ಚಿನ ಆರಾಧ್ಯ ದೈವವಾಗಿ ಪ್ರಸಿದ್ಧಿಯಾಗಿದ್ದಾಳೆ.

ಅಂಬಿಕೆ ಆಲಯದ ಐತಿಹ್ಯ: ವಿಜಯನಗರ ಸಾಮ್ರಾಜ್ಯದ ಸಾಮಂತ ಆಳ್ವಿಕೆಯಿಂದ ಬೇರ್ಪಟ್ಟ ನಂತರ ಮೈಸೂರು ಅರಸರ ಆಳ್ವಿಕೆಯ ಪ್ರಾರಂಭದ ದಿನಗಳ ಕಾಲ.

1610ರಲ್ಲಿ ಶ್ರೀರಂಗಪಟ್ಟಣದಿಂದ ಆಳ್ವಿಕೆ ಪ್ರಾರಂಭಿಸಿದ ರಾಜ ಒಡೆಯರ್, 1616-1636ರ ಅವಧಿಯಲ್ಲಿ ರಾಜಗುರು ಶೃಂಗೇರಿಯ ಶ್ರೀ ಭಾರತೀ ಶಂಕರಾಚಾರ್ಯ ಶ್ರೀಗಳನ್ನು ಮೈಸೂರು ಪ್ರಾಂತ್ಯಕ್ಕೆ ಕರೆತಂದು ಗೌರವ ಸಮರ್ಪಿಸಿ ಮರಳಿ ಕಳಿಸಿಕೊಡುವ ವೇಳೆ ಶ್ರೀಗಳ ದಿವ್ಯದೃಷ್ಟಿಯಲ್ಲಿ ಶಕ್ತಿದೇವತೆ ನಿಮಿಷಾಂಬೆಯ ಉದ್ಭವ ಕುರಿತು ಸ್ವಪ್ನದಲ್ಲಿ ಕಾಣಿಸಿಕೊಳ್ಳುತ್ತಾಳೆ. ಬಳಿಕ ಈ ವಿಚಾರವನ್ನು ರಾಜ ಒಡೆಯರ್ ಅವರೊಂದಿಗೆ ಶ್ರೀಗಳು ಚರ್ಚೆ ನಡೆಸಿ ಪವಿತ್ರ ಸ್ಥಳದಲ್ಲಿ ದೇಗುಲ ಸ್ಥಾಪನೆಗೆ ಸಲಹೆ ನೀಡುತ್ತಾರೆ. ಶ್ರೀಗಳ ನಿರ್ದೇಶನದಂತೆಯೇ ರಾಜ ಒಡೆಯರ್ ಕಾವೇರಿ ತಟದಲ್ಲಿ ಶೃಂಗೇರಿ ಶ್ರೀಗಳ ಸಾನ್ನಿಧ್ಯದಲ್ಲಿ *ಸಾಲಿಗ್ರಾಮ ಕೃಷ್ಣ ಶಿಲಾ ಮೂರ್ತಿಯನ್ನು ಶ್ರೀಯಂತ್ರದ ಚಕ್ರದ ಸಹಿತ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಆ ಮೂಲಕ ದೇಗುಲದ ಮರುಸ್ಥಾಪನೆ ಕಾರ್ಯ ನೆರವೇರಿಸಿದ್ದು, ಮೈಸೂರು ಚರಿತೆಯಲ್ಲೂ ಇದರ ದಾಖಲೆ ಇದೆ.

ಅಂಬಿಕೆ ನಿಮಿಷಾಂಬಿಕೆಯಾದ ಪೌರಾಣಿಕ ಹಿನ್ನೆಲೆ: ಪುರಾಣ ಕಾಲದಲ್ಲಿ ಸುಮನಸ್ಕ (ಮುಕ್ತರಾಜ) ಎಂಬ ಮಹಾರಾಜ ಲೋಕಕಲ್ಯಾಣರ್ಥವಾಗಿ ಕಾವೇರಿ ತೀರದಲ್ಲಿ ಮಹಾಯಜ್ಞ ಮಾಡಲು ಮುಂದಾಗುತ್ತಾರೆ. ಇದೇ ನೆಲದಲ್ಲಿ ಜಾನು ಮತ್ತು ಸುಮಂಡಲ ಎಂಬ ರಾಕ್ಷಸರಿಬ್ಬರು ಕಂಟಕ ಪೀಡಿತರಾಗಿರುತ್ತಾರೆ. ಆದರೆ ಈ ಸಮಯವನ್ನೇ ಅವಕಾಶವಾಗಿ ಬಳಸಿದ ನಾರದರು, ರಾಕ್ಷಸರ ಸಂಹಾರಕ್ಕೆ ಸಂಚು ರೂಪಿಸಿ ಮಹಾಯಜ್ಞ ನಡೆಸದೆ ತಡೆಯುವಂತೆ ಮುಕ್ತರಾಜನ ವಿರುದ್ಧ ಜಾನು ಮತ್ತು ಸುಮಂಡಲನನ್ನು ಎತ್ತಿ ಕಟ್ಟುತ್ತಾರೆ. ನಾರದನ ಚಾಡಿ ಮಾತಿನಿಂದ ಕುಪಿತರಾದ ರಾಕ್ಷಸರು, ತಮ್ಮ ಮಕ್ಕಳಾದ ಸೂರ್ಯಬಾಹು ಮತ್ತು ಘಟೋದರನನ್ನು ಮಹಾಯಜ್ಞ ತಡೆಯಲು ಕಳುಹಿಸಿದ್ದು, ಈ ವೇಳೆ ಇಬ್ಬರು ಮಕ್ಕಳು ಯುದ್ಧದಲ್ಲಿ ಅವನತಿ ಕಾಣುತ್ತಾರೆ. ಇದರಿಂದ ರೊಚ್ಚಿಗೆದ್ದ ಜಾನು ಮತ್ತು ಸುಮಂಡಲ ತಾವೇ ಖುದ್ದು ಯುದ್ಧಕ್ಕೆ ಇಳಿದ ವೇಳೆ ಮಹಾಯಜ್ಞ ಕೈಗೊಂಡಿದ್ದ ಮಹಾರಾಜ ಸುಮನಸ್ಕ ಕಷ್ಟ ನಿವಾರಣೆಗೆ ಪಾರ್ವತಿ ದೇವಿಯಲ್ಲಿ ಪ್ರಾರ್ಥಿಸಿದಾಗ ನಿಮಿಷ ಮಾತ್ರದಲ್ಲೇ ಪ್ರತ್ಯಕ್ಷಳಾಗಿ ಆ ರಾಕ್ಷಸರನ್ನು ಸಂಹಾರ ಮಾಡಿದಳು ಎನ್ನುವುದು ಐತಿಹ್ಯ. ನಿಮಿಷ ಎಂದರೆ ಸಂಸ್ಕೃತ ಪದದಲ್ಲಿ ಕಣ್ಣು ಎನ್ನಲಾಗಿದ್ದು, ಕಣ್ಣು ಮುಚ್ಚುವಲ್ಲೇ ಭಕ್ತರ ಸಮಸ್ಯೆಗಳನ್ನು ಪರಿಹರಿಸುವ ದೇವಿ ಎಂಬುದು ಇಲ್ಲಿ ಗಮನಾರ್ಹ.

ನಿಮಿಷಾಂಬ ಮೂರ್ತಿಯ ವೈಶಿಷ್ಟೃತೆ: ಶ್ರೀ ನಿಮಿಷಾಂಬಿಕೆ ಮೂರ್ತಿ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು, ಇಲ್ಲಿನ ಪ್ರಭಾವಳಿಗಳನ್ನು ಹೆಚ್ಚಿಸಲು ಕಾರಣ ಎಂಬುದು ಭಕ್ತರ ನಂಬಿಕೆ.

ದೇವಿಯ ಮೂರ್ತಿ ಸುಮಾರು 4 ಅಡಿ ಎತ್ತರವಿದ್ದು, ದೇವಿಯ ಕಣ್ಣುಗಳು ಬಹುಪಾಲು ಮುಚ್ಚಿದಂತೆ ಧ್ಯಾನಾಸಕ್ತ ಭಂಗಿಯಲ್ಲಿ ಏಕಾಸನ ರೂಪದ ಪೀಠದಲ್ಲಿ ಕುಳಿತಿದೆ. ದೇವಿಯ ಮುಂಭಾಗದಲ್ಲಿರುವ ಅಪೂರ್ವ ಬೀಜಾಕ್ಷರವುಳ್ಳ ಶ್ರೀಚಕ್ರವನ್ನು ಕೆಳಮುಖವಾಗಿ ದಿಟ್ಟಿಸಿ ನೋಡುವಂತೆ ಗೋಚರವಾಗುತ್ತದೆ. ದೇವಿಯ ಮೂರ್ತಿಯೂ ಕೃಷ್ಣ ಶಿಲೆಯಲ್ಲಿ ಕೆತ್ತಿದ್ದು, ಎಡಗೈನಲ್ಲಿ ಢಮರು ಮತ್ತು ಬಲಗೈನಲ್ಲಿ ತ್ರಿಶೂಲ ಹಿಡಿದ ಅಭಯ ವರದ ಹಸ್ತಗಳ ಚತುರ್ಭುಜ ಕಾಣುತ್ತದೆ. ಪಾದದಡಿಯಲ್ಲಿ ಶ್ರೀಯಂತ್ರದ ಚಕ್ರದಲ್ಲಿ ದೇವಿಯ ಶಕ್ತಿಯ ವರ್ಣನೆ ಕುರಿತ 16 ಅಪೂರ್ವ ಶೋಡಾಷಕ್ಷರಿ ಮೂಲಮಂತ್ರಗಳ ಬೀಜಾಕ್ಷರಗಳು ಶೃಂಗೇರಿ ಶ್ರೀಗಳ ರಚನೆಯೊಂದಿಗೆ ಸ್ಪಷ್ಟ ರೇಖೆಗಳಿಂದ ಒಳಗೊಂಡಿದೆ.

ರಾಜಾಶ್ರಯಕ್ಕೆ ಒಳಪಟ್ಟಿದ್ದ ದೇಗುಲ: ಮೈಸೂರು ಮಹಾರಾಜರ ಆಡಳಿತಾವಧಿಯಲ್ಲಿ ರಾಜಾಶ್ರಯಕ್ಕೆ ಒಳಪಟ್ಟಿದ್ದ ಶ್ರೀ ನಿಮಿಷಾಂಬ ದೇಗುಲದಲ್ಲಿ ಕೆಲ ಕಾರಣಗಳಿಂದ ಸಾಕಷ್ಟು ವರ್ಷ ಯಾವುದೇ ಪೂಜಾ ನಡೆದಿರಲಿಲ್ಲ. ಆದರೆ ನಿಮಿಷಾಂಬಿಕೆಯನ್ನು ಕುಲದೇವತೆಯನ್ನಾಗಿ ಪರಿಗಣಿಸಿದ್ದ ಸೋಮೇಶ ಆರ್ಯ-ಕ್ಷತ್ರಿಯ ಜನಾಂಗದ ಜನರು ತಾವು ಇದನ್ನು ನಿರ್ವಹಣೆ ಮಾಡುವುದಾಗಿ ತಿಳಿಸಿ ತಮ್ಮ ವಶಕ್ಕೆ ಪಡೆದರು. ನಂತರ ದೇಗುಲವನ್ನು ನ್ಯಾಯಾಲಯದ ಸೂಚನೆಯಂತೆ ರಾಜ್ಯ ಸರ್ಕಾರದ ಸುಪರ್ದಿಗೆ ಪಡೆಯಲಾಯಿತು.

ದೇವಿ ಆರಾಧನೆ ಮತ್ತು ವಿಶೇಷ ದಿನಗಳು: ಮಂಗಳವಾರ ಹಾಗೂ ಶುಕ್ರವಾರ ನಿಮಿಷಾಂಬೆ ದೇವಿಯ ಆರಾಧನೆ ದಿನ. ಇನ್ನು ಅಷ್ಟಮಿ, ನವಮಿ, ಚರ್ತುದಶಿ ಹಾಗೂ ಪೌರ್ಣಿಮೆ ಅತ್ಯಂತ ವಿಶೇಷ ಪೂಜಾ ದಿನ. ವೈಶಾಖ ಮಾಸದ ಶುಕ್ಲ ಪಕ್ಷ ದಶಮಿ ಜನ್ಮದಿನವಾದ ಕಾರಣ ದಶಮಿಯಂದು ನಿಮಿಷಾಂಬ ವರ್ಧಂತಿ ಉತ್ಸವ ವಿಜೃಂಭಣೆಯಿಂದ ನೆರವೇರಲಿದೆ. ನಿಮಿಷಾಂಬ ದೇವಿಗೆ ಮುಂಜಾನೆ 5 ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಚಕ್ರ ಪೂಜಾ ಕೈಂಕರ್ಯ ನೆರವೇರಲಿದೆ.

ನಿಮಿಷಾಂಬ ದೇವಾಲಯದಲ್ಲಿ ಸೂರ್ಯ, ಗಣಪತಿ, ನಿಮಿಷಾಂಬಿಕೆ, ಮೌಕ್ತಿಕೇಶ್ವರ ಹಾಗೂ ಲಕ್ಷ್ಮೀನಾರಾಯಸ್ವಾಮಿಗೆ ನಿತ್ಯವೂ ಐದು ಸಂಪ್ರದಾಯಗಳಲ್ಲಿ ಪಂಚಾಮೃತ ಸೇವೆ, ಪಂಚೋಪಚಾರ, ರಾಜೋಪಚಾರ, ಸಂಜೆ ಚರ್ತುವೇದ ಮಂತ್ರಗಳು, ಶಾಸ್ತ್ರ ವಾಖ್ಯಗಳ ಪಠಣೆ, ಪಂಚಾಂಗ ಶ್ರವಣ, ಪುರಾಣ ಶ್ರವಣ, ಸಂಗೀತ ಸೇವೆ, ಸ್ತ್ರೋತ್ರ ಸೇವೆ ಹಾಗೂ ಮಂಗಳವಾದ್ಯ ಅರ್ಪಣೆಯೊಂದಿಗೆ ಅಂತಿಮ ಪೂಜೆ ನೆರವೇರಿಸಲಾಗುತ್ತದೆ. ಈ ಕಾರಣದಿಂದಲೇ ಭಕ್ತರ ಕಷ್ಟಗಳು ಈ ದೇವಾಲಯದಲ್ಲಿ ನಿಮಿಷ ಮಾತ್ರದಲ್ಲೇ ಪರಿಹಾರವಾಗುತ್ತದೆ ಎನ್ನಲಾಗುತ್ತದೆ.

ಭರತ ನೆಲದ ಸಪ್ತ ನದಿಗಳಾದ ಗಂಗೆ, ಯುಮುನೆ, ನರ್ಮದಾ, ಸಿಂಧೂ, ಸರಸ್ವತಿ, ಗೋದಾವರಿ, ಕಾವೇರಿಯಲ್ಲಿ ಸ್ನಾನ ಮಾಡಿದಾಗ ಪ್ರಾಪ್ತಿಯಾಗುವ ಪುಣ್ಯಕ್ಕಿಂತ ಅಧಿಕವಾಗಿ ಮಾಘ ಮಾಸದಲ್ಲಿ ಅಪೂರ್ವ ಬೀಜಾಕ್ಷರಗಳ ಶ್ರೀಚಕ್ರವಿರುವ ನೆಲದ ಕಾವೇರಿ ನದಿಯಲ್ಲಿ ಶುದ್ಧ ಸ್ನಾನ ಮಾಡುವುದರಿಂದ ಕಷ್ಟ ಕಾರ್ಪಣ್ಯ ಕಳೆದು ಪುಣ್ಯ ಲಭಿಸುತ್ತದೆ ಎಂಬುದು ಅನೂಚನವಾಗಿ ನಡೆದುಬಂದಿದೆ. ಹೀಗಾಗಿ ಆ ಸಮಯದಲ್ಲಿ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.

ನಿಮಿಷಾಂಬ ದೇವಾಲಯ ವಾತುಲಾಗಮ ಶೈಲಿಯಲ್ಲಿ ನಿರ್ಮಾಣವಾಗಿದೆ. ಗೋಕರ್ಣ ಮಂಡಲ ಕ್ಷೇತ್ರದಂತೆ ಇಲ್ಲೂ ಸೂರ್ಯ, ಗಣಪತಿ, ಅಂಬಿಕೆ, ಶಿವ, ವಿಷ್ಣು ದೇವರ ಪಂಚವಾಹಿತನದಲ್ಲಿ ಪಂಚಮೂರ್ತಿ ಪೂಜೆಗಳು ಹವ್ಯಾಕ ಬ್ರಾಹ್ಮಣ ಸಂಪ್ರದಾಯದಲ್ಲಿ ನಡೆಯುತ್ತವೆ. ಹಿಂದೆ ಈ ರೀತಿಯಾಗಿ ದೇವಾಲಯ ಪ್ರತಿಷ್ಠಾಪನೆಗೊಂಡ ಕಾರಣದಿಂದಲೇ 1963ರ ಬಳಿಕ ದೇವಾಲಯದಲ್ಲಿ ನಿತ್ಯ ಪೂಜೆ ಮುನ್ನಲೆಗೆ ಬಂತು. ಉತ್ತರ ಕರ್ನಾಟಕ ಭಾಗದ ವೈದಿಕರನ್ನೇ ಕರೆಸಿ ಪೂಜಿಸಲು ಅವಕಾಶ ನೀಡಲಾಗಿದೆ. 1987ರ ಬಳಿಕ ನಿಮಿಷಾಂಬ ದೇವಾಲಯ ಹೆಚ್ಚು ವಿಶ್ವ ಪ್ರಸಿದ್ಧಿಗೆ ಬಂದಿತು. ಇದಕ್ಕೆ ಸಾಕ್ಷಿಯಾಗಿ ಸಿಂಗಾಪುರದ ಪ್ರವಾಸೋದ್ಯಮ ಮತ್ತು ಕಾನೂನು ಸಚಿವರು ದೇವಿಯ ಆರಾಧಕರಾಗಿದ್ದು, 365 ದಿನವೂ ನಿತ್ಯ ಕುಂಕುಮಾರ್ಚನೆ ಹಾಗೂ ವಿಶೇಷ ಸೇವೆಗಳಿಗೆ ಪ್ರತಿ ವರ್ಷವೂ ದೇವಾಲಯಕ್ಕೆ ಹಣ ಪಾವತಿಸುತ್ತಾರೆ.

ಸೂರ್ಯನಾರಾಯಣ ಭಟ್ ಪ್ರಧಾನ ಅರ್ಚಕ , ವಾತುಲಾಗಮ ಶೈಲಿಯ ದೇವಾಲಯ

ನಿಮಿಷಾಂಬ ದೇವಾಲಯಕ್ಕೆ ವಾರದ ದಿನಗಳಲ್ಲಿ ನಿತ್ಯ 2 ಸಾವಿರ ಜನರು ಆಗಮಿಸಲಿದ್ದು, ವಾರಾಂತ್ಯದ ದಿನಗಳಲ್ಲಿ ಸುಮಾರು 5 ಸಾವಿರದಷ್ಟು ಏರಿಕೆಯಾಗಲಿದೆ. ಹುಣ್ಣಿಮೆ ಹಾಗೂ ವಿಶೇಷ ದಿನಗಳಲ್ಲಿ 8 ಸಾವಿರ ಭಕ್ತರ ಆಗಮನವಾಗುತ್ತದೆ. ಭಕ್ತರಿಗೆ ಅತ್ಯಂತ ಸುಸಜ್ಜಿತ ಕಟ್ಟಡದಲ್ಲಿ, ಸ್ವಚ್ಛತೆಯ ಸ್ಥಳಗಳಲ್ಲಿ ಕೂರುವ ವ್ಯವಸ್ಥೆಯೊಂದಿಗೆ ಅನ್ನಸಂತರ್ಪಣೆ ನಡೆಸಲಾಗುತ್ತಿದೆ. ವಾರ್ಷಿಕ 8 ಕೋಟಿ ರೂ. ಆದಾಯವಿರುವ ಹೆಗ್ಗಳಿಕೆ ನಿಮಿಷಾಂಬ ದೇಗುಲಕ್ಕಿದೆ.

ಸಿ.ಜಿ.ಕೃಷ್ಣ ಇಒ, ನಿಮಿಷಾಂಬ ದೇವಾಲಯ