ಭದ್ರಾವತಿ: ಸನಾತನ ಧರ್ಮದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇರುವಂತಹ ಬಹುದೊಡ್ಡ ಪರಂಪರೆ ಎಂದರೆ ಅದು ಭೈರವನಾಥ ಪರಂಪರೆ ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ನಗರದ ಕಡದಕಟ್ಟೆಯಲ್ಲಿ ಶ್ರೀ ಕಾಲಭೈರವೇಶ್ವರ ಟ್ರಸ್ಟ್‌ನಿಂದ ನಿರ್ಮಿಸಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿಯ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ, ಸ್ಥಿರಬಿಂಬ ಪ್ರತಿಷ್ಠಾಪನೆ ಮತ್ತು ದೀಪಸ್ತಂಭ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ದೇವಾಲಯಗಳು ಶ್ರದ್ಧಾಭಕ್ತಿಯ ಕೇಂದ್ರಗಳು. ಅಂತಹ ಕೇಂದ್ರಗಳಿಗೆ ಸದಾ ಭೇಟಿ ಕೊಡಬೇಕು. ಪರಿಸರದ ಮಧ್ಯೆ ನಿರ್ಮಾಣವಾಗಿರುವ ಕಾಲಭೈರವ ದೇವಸ್ಥಾನ ಸದ್ಭಕ್ತರಿಗೆ ಶ್ರದ್ಧಾಭಕ್ತಿಯ, ಸದ್ಗುಣ, ಸದಾಚಾರಗಳನ್ನು ನೀಡುವಂತಹ, ದುರ್ಗುಣ, ದುರಾಚಾರಗಳನ್ನು ನಿವಾರಣೆ ಮಾಡುವ ಕೇಂದ್ರವಾಗಿ ಬೆಳೆಯಲಿ ಎಂದು ಆಶಿಸಿದರು.
ಮನುಷ್ಯನಿಗೆ ಕಷ್ಟಗಳು ಬಾರದಿದ್ದರೆ ದೇವರ ಮೇಲೆ ನಂಬಿಕೆ, ಭಕ್ತಿ ಇರುತ್ತಿರಲಿಲ್ಲ. ಕಷ್ಟ ಬಂದಾಗ ನೆನಪು ಮಾಡಿಕೊಂಡು ದೇವಸ್ಥಾನಕ್ಕೆ ಹೋಗುವ ಬದಲಾಗಿ ಸುಖವಿದ್ದಾಗಲೂ ದೇವಸ್ಥಾನಗಳಿಗೆ ಹೋಗುವುದನ್ನು ರೂಢಿಸಿಕೊಳ್ಳಬೇಕು. ಸನಾತನ ಧರ್ಮದಲ್ಲಿ ದೇವಾಲಯಗಳಿಗೆ ಹೆಚ್ಚಿನ ಮಹತ್ವವಿದೆ ಎಂದರು.
ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆಗೆ ಹೆಚ್ಚು ಮಹತ್ವವಿದೆ. ಬಸವಣ್ಣ ಹೇಳುವಂತೆ ದೇವನೊಬ್ಬ ನಾಮ ಹಲವು. ನಂಬಿದವರಿಗೆ ಕಲ್ಲೇ ದೇವರು. ನಾವೆಲ್ಲರೂ ನಂಬಿಕೆಯಿಂದಲೇ ಧರ್ಮಾಚರಣೆ ಮಾಡಿಂಡು ಬರುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಮಕ್ಕಳನ್ನು ವೈದ್ಯರು, ಇಂಜಿನಿಯರ್‌ಗಳನ್ನಾಗಿ ಮಾಡುವ ಭರದಲ್ಲಿ ಪಾಲಕರಿದ್ದಾರೆ. ವೈದ್ಯರನ್ನಾಗಿ ಮಾಡಿದ ಪಾಲಕರು ಕೊನೆಯಲ್ಲಿ ವೃದ್ಧಾಶ್ರಮಗಳನ್ನು ಸೇರುವಂತಾಗಿದೆ. ಕೇವಲ ಶಿಕ್ಷಣ ನೀಡಿದರೆ ಸಾಲದು. ಜತೆಗೆ ಸಂಸ್ಕಾರವನ್ನೂ ಕೊಡಬೇಕು. ರೈತರ ಮಕ್ಕಳು ಪಾಲಕರನ್ನು ವೃದ್ಧಾಶ್ರಮಕ್ಕೆ ಸೇರಿಸಿರುವ ನಿದರ್ಶನಗಳು ಇಂದಿಗೂ ಕಾಣುತ್ತಿಲ್ಲ ಎಂಬುದು ಸಂತಸದ ವಿಚಾರ ಎಂದರು.
ಚಿತ್ರದುರ್ಗ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಮಾಜಿ ಎಂಎಲ್‌ಸಿ ರುದ್ರೇಗೌಡ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ, ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಲಕ್ಷ್ಮಣ್ ಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ, ಪ್ರಮುಖರಾದ ಜಿ.ಧರ್ಮಪ್ರಸಾದ್, ಎಸ್.ಎಸ್.ಜ್ಯೋತಿಪ್ರಕಾಶ್, ಬಿ.ಕೆ.ಜಗನ್ನಾಥ್, ಬಿ.ಕೆ.ಶಿವಕುಮಾರ್, ಜಗದೀಶ್. ಜಯರಾಮ್ ಇತರರಿದ್ದರು.