ನವದೆಹಲಿ: ಭಾರತವನ್ನು ಬೃಹತ್ ಮಿಲಿಟರಿ ಮತ್ತು ಆರ್ಥಿಕ ಶಕ್ತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಹಿಂದು ಸಮಾಜದಲ್ಲಿ ಒಗ್ಗಟ್ಟು ಸಾಧಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ‘ಹಲವು ಶಕ್ತಿಗಳು ಒಟ್ಟಾಗಿ ಬಂದರೂ’ ಸೋಲಿಸಲಾಗದ ರೀತಿಯಲ್ಲಿ ದೇಶವನ್ನು ಸದೃಢಗೊಳಿಸಬೇಕೆಂದು ಸಂಘದ ವಾರಪತ್ರಿಕೆ ಆರ್ಗನೈಸರ್ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾದ ಸಂದರ್ಶನದಲ್ಲಿ ಭಾಗ್ವತ್ ಪ್ರತಿಪಾದಿಸಿದ್ದಾರೆ. ಬಲವು ಮೌಲ್ಯ ಮತ್ತು ನೈತಿಕತೆಯನ್ನು ಆಧರಿಸಿರಬೇಕು. ಯಾಕೆಂದರೆ ಕೇವಲ ವಿವೇಚನಾರಹಿತ ಅಧಿಕಾರವು ದಿಕ್ಕುದೆಸೆಯಿಲ್ಲದಂತಾಗಿದ್ದು ‘ನಗ್ನ ಹಿಂಸಾಚಾರ’ಕ್ಕೆ ಎಡೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆ, ಮಿಲಿಟರಿ ಬಲ ಹಾಗೂ ಆರ್ಥಿಕ ಶಕ್ತಿ ಕುರಿತು ಸಂಘದ ದೃಷ್ಟಿಕೋನದ ಬಗ್ಗೆ ಸಂದರ್ಶಕರು ಕೇಳಿದ ಪ್ರಶ್ನೆಗೆ ಪ್ರತಿಯಾಗಿ ಭಾಗ್ವತ್ ಈ ನಿಲುವನ್ನು ವ್ಯಕ್ತಪಡಿಸಿದ್ದಾರೆ. ದೇಶದ ಎಲ್ಲ ಗಡಿಗಳಲ್ಲಿ ‘ಕೆಟ್ಟ ಶಕ್ತಿಗಳ ದುಷ್ಟತನದ ಪ್ರದರ್ಶನವಾಗುತ್ತಿರುವುದರಿಂದ’ ದೇಶ ಬಲಿಷ್ಠವಾಗುವುದಲ್ಲದೆ ಅನ್ಯಮಾರ್ಗವಿಲ್ಲ ಎಂದು ಸಂದರ್ಶನದಲ್ಲಿ ಮೋಹನ್ ಭಾಗ್ವತ್ ಪ್ರತಿಪಾದಿಸಿದ್ದಾರೆ.