ಬಾಳೆಹೊನ್ನೂರು: ಮೆಣಸುಕೊಡಿಗೆ ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಿಸಲು ಸ್ವಂತ ಖರ್ಚಿನಿಂದ ಅಗತ್ಯ ನೆರವು ನೀಡಲಾಗುವುದು ಎಂದು ಕುವೈತ್ ಉದ್ಯಮಿ ಕ್ಲಿರ್ಡ್ ಲಾರೆನ್ಸ್ ಸಿಕ್ವೇರಾ ಹೇಳಿದರು.
ಸಮೀಪದ ಮೆಣಸುಕೊಡಿಗೆಯ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ಸ್ಥಳೀಯ ಯುವಕರು ಸೋಮವಾರ ಆಯೋಜಿಸಿದ್ದ ಮಂದಾರ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪದಲ್ಲಿ ಅವರು ಮಾತನಾಡಿದರು.
ಮೆಣಸುಕೊಡಿಗೆ ಗ್ರಾಮದಲ್ಲಿ ಕ್ರೀಡಾಂಗಣದ ಕೊರತೆಯಿದ್ದು ಯುವಕರು ಕಿರಿದಾಗಿರುವ ಕ್ರೀಡಾಂಗಣದಲ್ಲಿ ಆಟ ಆಡಬೇಕಿದೆ. ಇಲ್ಲಿನ ಯುವಕರ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು ಇದನ್ನು ಸ್ಥಳೀಯ ಶಾಸಕರ, ರಾಜಕೀಯ ಮುಖಂಡರ ಗಮನಕ್ಕೆ ತಂದು ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು. ಜನಪ್ರತಿನಿಧಿಗಳು ಅಭಿವೃದ್ಧಿ ಮಾಡದಿದ್ದಲ್ಲಿ ನಾನೇ ನನ್ನ ಸ್ವಂತ ಖರ್ಚಿನಿಂದ ಕ್ರೀಡಾಂಗಣ ಅಭಿವೃದ್ಧಿಗೆ ಹಣಕಾಸನ್ನು ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಜಯಪುರ ಸತ್ಯಸಾಯಿ ಟ್ರಸ್ಟ್‌ನ ಪ್ರಾಚಾರ್ಯ ಶೇಷಗಿರಿ ಮಾತನಾಡಿ, ಮೆಣಸುಕೊಡಿಗೆ ಗ್ರಾಮದಲ್ಲಿ ಯುಗಾದಿ ಸಂದರ್ಭದಲ್ಲಿ ಯುವಕರು ಒಗ್ಗೂಡಿ ಕ್ರೀಡಾಕೂಟಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಕ್ರೀಡೆಗಳಿಂದ ಸದೃಢ ದೇಶ ನಿರ್ಮಾಣ ಸಾಧ್ಯವಿದೆ ಎಂದು ಹೇಳಿದರು.
ಸತ್ಯಸಾಯಿ ಸಂಸ್ಥೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದು ರಾಜ್ಯಾದ್ಯಂತ ಎಲ್ಲ ಸರ್ಕಾರಿ ಶಾಲೆಗಳಿಗೆ ಸಾಯಿ ಶ್ಯೂರ್ ಎಂಬ ಪೌಷ್ಟಿಕ ಆಹಾರ ನೀಡುವ ಕಾರ್ಯ ಮಾಡುತ್ತಿದೆ. ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎಂಬ ಆಶಯ ಸಂಸ್ಥೆಯದ್ದಾಗಿದೆ. ಆಹಾರ, ಶಿಕ್ಷಣ ಪ್ರತಿಯೊಬ್ಬರಿಗೂ ಉಚಿತವಾಗಿ ಸಿಗಬೇಕು. ಶುಲ್ಕರಹಿತ ಸೇವೆ ಲಭಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಪಂದ್ಯಾವಳಿಯಲ್ಲಿ ಬೆಂಗಳೂರಿನ ಎಜೆ ಸ್ಫೋರ್ಟ್ಸ್ (ಪ್ರ), ಸೌಂದರ್ಯ ಸೋಲ್ಜರ್ಸ್ (ದ್ವಿ), ದಶರಥ ಕ್ರಿಕೆಟರ್ಸ್ (ತೃ), ಆಯುಷ್ ಕ್ರಿಕೆಟರ್ಸ್ (ಚ) ಸ್ಥಾನ ಪಡೆಯಿತು. ಸುರೇಂದ್ರ (ಪಂದ್ಯ ಪುರುಷೋತ್ತಮ), ಅಶ್ರ್ (ಬೆಸ್ಟ್ ಬ್ಯಾಟ್ಸ್‌ಮೆನ್), ಪ್ರವೀಣ್ ಪೂಜಾರಿ (ಬೆಸ್ಟ್ ಬೌಲರ್), ನವೀನ್ (ಬೆಸ್ಟ್ ಕೀಪರ್), ನಾರಾಯಣ (ಬೆಸ್ಟ್ ಫೀಲ್ಡರ್), ಪ್ರವೀಣ್ ಪೂಜಾರಿ (ಸರಣಿ ಶ್ರೇಷ್ಠ) ಪ್ರಶಸ್ತಿ ಪಡೆದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಗ್ರಾಪಂ ಸದಸ್ಯ ಎಂ.ಜೆ.ಮಹೇಶ್ ಆಚಾರ್ಯ, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀನ್, ಜಿಲ್ಲಾ ಚುಸಾಪ ಅಧ್ಯಕ್ಷ ಯಜ್ಞಪುರುಷಭಟ್, ಸತ್ಯ ಸಾಯಿ ಟ್ರಸ್ಟ್ ಸದಸ್ಯ ವೃಶಾಂಕ್, ಪ್ರಮುಖರಾದ ಜಗದೀಶ್ ಅರಳೀಕೊಪ್ಪ, ರಶೀದ್, ಹಸನ್, ಸತೀಶ್ ಅರಳೀಕೊಪ್ಪ, ಬಶೀರ್, ಎಸ್.ಎನ್.ನಾರಾಯಣಗೌಡ, ಕೃಷ್ಣಪ್ಪ, ನಾಗರಾಜ್, ಜೆಸ್ಸಿ ಲೋಬೋ, ಅಬ್ದುಲ್ ರೆಹಮಾನ್ ಇತರರಿದ್ದರು.