ಶಿವಮೊಗ್ಗ: ವಿದ್ಯಾನಗರ, ಸವಳಂಗ ರಸ್ತೆ ಮತ್ತು ಸೋಮಿನಕೊಪ್ಪ ಭಾಗದ ರೈಲ್ವೆ ಮೇಲ್ಸೇತುವೆಗಳು ಉದ್ಘಾಟನೆಗೊಂಡು ಸಂಚಾರಕ್ಕೆ ಮುಕ್ತವಾಗಿವೆ. ಭದ್ರಾವತಿ ಕಡದಕಟ್ಟೆ ಮೇಲ್ಸೇತುವೆ ಮಾತ್ರ ಬಾಕಿ ಇದ್ದು ಹಗಲು-ರಾತ್ರಿ ಕೆಲಸ ಮಾಡಿ ಏಪ್ರಿಲ್ ಮೊದಲ ವಾರದಲ್ಲಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಭದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ದಿಶಾ ಸಭೆ ನಡೆಸಿದ ಅವರು, ಇಷ್ಟೆಲ್ಲ ಕೆಲಸ ಮಾಡಿದರೂ ಜನರಿಂದ ಟೀಕೆಗೆ ಒಳಗಾಗುವುದಕ್ಕೆ ನಾನು ಸಿದ್ಧನಿಲ್ಲ. ತಕ್ಷಣ ಕೆಲಸ ಮುಗಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು. ಗುಂಡಪ್ಪಶೆಡ್ ಮತ್ತು ವಿದ್ಯಾನಗರದಲ್ಲಿ ಕೆಳಸೇತುವೆ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ 62 ಸಾವಿರ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 995 ಅಭ್ಯರ್ಥಿಗಳಿಗೆ ಕೌಶಲಾಭಿವೃದ್ಧಿ ತರಬೇತಿ ಆಗಿದೆ. ಮೊದಲ ಹಂತದಲ್ಲಿ 23 ಸಾವಿರ ಹಾಗೂ ಎರಡನೇ ಹಂತದಲ್ಲಿ 1,976 ಅಭ್ಯರ್ಥಿಗಳ ಅನುಮೋದನೆ ಆಗಿದೆ. ಎಲ್ಲ ಅಭ್ಯರ್ಥಿಗಳ ಅನುಮೋದನೆಗೆ ಅಪರ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಅಂಗವಿಕಲರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯಡಿ ಮಂಜೂರಾದ ರೆಟ್ರೋವ್ಹೀಲ್ ಫಿಟ್ಟೆಡ್ ಮೋಟಾರ್ ಸೈಕಲ್ಗಳನ್ನು ಚುನಾವಣೆ ಆಗುವವರೆಗೆ ಕಾಯದೆ ಮಾ.5 ಅಥವಾ 6ರಂದು ಕಾರ್ಯಕ್ರಮ ಆಯೋಜಿಸಿ ನೀಡುವಂತೆ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು. ಅಂಗವಿಕಲ ಕಲ್ಯಾಣಾಧಿಕಾರಿ ಎನ್.ಚಂದ್ರಪ್ಪ ಮಾತನಾಡಿ, ಪ್ರಸ್ತುತ 53 ವಾಹನಗಳು ಸಿದ್ಧವಿದ್ದು ರಾಜ್ಯ ಸರ್ಕಾರದಿಂದ 140 ವಾಹನಗಳಿಗೆ ಮಂಜೂರಾತಿ ದೊರೆತಿದೆ ಎಂದರು.