ನ್ಯೂಸ್

25ರಿಂದ ಭದ್ರಾ ನಾಲೆಗಳಿಗೆ ನೀರು ನಿಲುಗಡೆ: ಪವಿತ್ರಾ ರಾಮಯ್ಯ

ಶಿವಮೊಗ್ಗ: ಭದ್ರಾ ಎಡದಂಡೆ ಮತ್ತು ಬಲದಂಡೆ ಭಾಗದ ರೈತರ ಜಮೀನುಗಳಿಗೆ ಭದ್ರಾ ಜಲಾಶಯದಿಂದ ಹರಿಸುತ್ತಿರುವ ನೀರನ್ನು ನ.25ರ ರಾತ್ರಿಯಿಂದಲೇ ನಿಲುಗಡೆ ಮಾಡುವುದು ಮತ್ತು ಮುಂಗಾರು ಹಂಗಾಮಿನ ಬೆಳೆಗಳಿಗೆ ಅನುಕೂಲ ಆಗುವ ಉದ್ದೇಶದಿಂದ ಡಿಸೆಂಬರ್ 25ರಿಂದ ಪುನಃ ನೀರು ಹರಿಸಲು ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು.

ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಬುಧವಾರ 82ನೇ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ(ಐಸಿಸಿ) ಸಭೆಯಲ್ಲಿ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಮಾತನಾಡಿ, ರೈತರ ಹಿತದೃಷ್ಟಿಯಿಂದ ನೀರು ನಿಲುಗಡೆ ಮಾಡುವ ಮತ್ತು ಪುನಃ ಹರಿಸುವ ಬಗ್ಗೆ ಸ್ಪಷ್ಟಪಡಿಸಿದರು.

ಈ ಬಾರಿ ಮಳೆ ಹೆಚ್ಚಾಗಿರುವುದರಿಂದ ಜಲಾಶಯದಲ್ಲಿ ಸಾಕಷ್ಟು ನೀರಿದೆ. ಅಲ್ಲದೆ, ಜಮೀನುಗಳಲ್ಲಿ ಇನ್ನೂ ತೇವಾಂಶ ಇರುವ ಕಾರಣ ಹಾಲಿ 10 ದಿನ ನೀರು ಹರಿಸಿ ಆನಂತರ ಒಂದು ತಿಂಗಳು ಸ್ಥಗಿತಗೊಳಿಸಲಾಗವುದು. ಬಳಿಕ ಡಿ.25ರಿಂದ 120 ದಿನ ಎರಡೂ ನಾಲೆಗಳಿಗೆ ನೀರು ಹರಿಸಲಾಗುವುದು ಎಂದರು.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದಿಂದ ಎಡದಂಡೆ, ಬಲದಂಡೆ ನಾಲೆಗಳು, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳ ಮೂಲಕ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ನೀರು ನಿಲ್ಲಿಸುವ ಸಂಬಂಧ ಚರ್ಚಿಸಿದ್ದು ಈ ಮಧ್ಯೆ ನೀರಿನ ಲಭ್ಯತೆಗನುಗುಣವಾಗಿ ಅವಶ್ಯಕತೆ ಬಿದ್ದಲ್ಲಿ ಅಥವಾ ಹೆಚ್ಚುವರಿ ನೀರು ಬಂದಲ್ಲಿ ಹಂತ ಹಂತವಾಗಿ ನೀರು ಹರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಸಲಹಾ ಸಮಿತಿ ಸದಸ್ಯರಾದ ಷಡಾಕ್ಷರಪ್ಪ, ಹನುಮಂತಪ್ಪ, ಜಿ.ಸದಾಶಿವಗೌಡ, ಷಣ್ಮುಖಪ್ಪ, ಶೇಖರಪ್ಪ, ಶ್ರೀನಿವಾಸ್, ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಎನ್.ಸುಜಾತಾ, ಕಾಡಾ ಆಡಳಿತಾಧಿಕಾರಿ ಪ್ರವೀಣ್, ಕೃಷಿ ಅಭಿವೃದ್ಧಿ ಅಧಿಕಾರಿ ಡಾ. ಎಂ.ಕಿರಣ್‌ಕುಮಾರ್ ಹಾಜರಿದ್ದರು.