ಬೆಂಗಳೂರು: ಅನಗತ್ಯವಾಗಿ ಪುರುಷರ ವಿರುದ್ಧ ಪ್ರಕರಣ ಹೂಡುತ್ತಿರುವ ಮಹಿಳೆಯ ಬಗ್ಗೆ ಎಲ್ಲ ಪೊಲೀಸ್ ಠಾಣೆಗಳು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡುವಂತೆ ನ್ಯಾಯಾಲಯ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.
ಮಹಿಳೆಯ ಕಿರುಕುಳದಿಂದ ಬೆಸತ್ತ ಆಕೆಯ ಹತ್ತನೇ ಪತಿ ಹಾಸನ ಜಿಲ್ಲೆಯ ಸಕಲೇಶಪುರದ ಬಾಳಗದ್ದೆಯ ಪಿ.ಕೆ.ವಿವೇಕ ತನ್ನ ಹಾಗೂ ತನ್ನ ಕುಟುಂಬದವರ ವಿರುದ್ಧ ಪತ್ನಿ ಕುಶಾಲನಗರದ ಮುಳ್ಳುಸೋಗೆಯ ದೀಪಿಕಾ ಹೂಡಿರುವ ಕ್ರಿಮಿನಲ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಮಹಿಳೆಯೂ ಹಲವು ಪುರುಷರ ವಿರುದ್ಧ ಈಗಾಗಲೇ ಲೈಂಗಿಕ ದೌರ್ಜನ್ಯ,ಅತ್ಯಾಚಾರ,ಅಪರಾಧಿಕ ಪಿತೂರಿ ಮತ್ತು ಐಪಿಸಿ ಸೆಕ್ಷನ್ 498ಎ ನಡಿ 10 ಪ್ರಕರಣಗಳನ್ನು ದಾಖಲಿಸಿದ್ದಾಳೆ. ಮುಂದುವರಿದು ಆಕೆಯೂ ಪ್ರಕರಣ ದಾಖಲಿಸುವುದನ್ನು ತಡೆಯಬೇಕಾದರೆ ಈ ರೀತಿಯ ಘಟನೆ ಬಗ್ಗೆ ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ಡಿಜಿಪಿಗೆ ಆದೇಶಿಸಿದೆ.
ಪ್ರತಿವಾದಿ ಮಹಿಳೆ ದೀಪಿಕಾಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಆಕೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ, ಅರ್ಜಿದಾರರ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ 2022ರಲ್ಲಿ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಿದೆ.
ಅಷ್ಟೇ ಅಲ್ಲದೆ, ಆ ಮಹಿಳೆಯ ವಿವರಗಳು ಈಗಾಗಲೇ ಹಲವು ಪೊಲೀಸ್ ಠಾಣೆಗಳಲ್ಲಿ ಲಭ್ಯವಿದೆ. ಹಾಗಾಗಿ ಆ ಮಹಿಳೆ ಮತ್ತೆ ಯಾವುದಾದರೂ ಪುರುಷರ ವಿರುದ್ಧ ಪ್ರಕರಣ ದಾಖಲಿಸಲು ಬಂದರೆ, ಅಂತಹ ಸಮಯದಲ್ಲಿ ಪೊಲೀಸರು ಸುಮ್ಮನೆ ಕೇಸು ದಾಖಲಿಸದೆ ಆಕೆಯ ದೂರಿನ ವಿಚಾರದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ನಂತರವೇ ಮುಂದಿನ ಕ್ರಮ ಜರುಗಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ಈ ರೀತಿ ಮಹಿಳೆ ಅನಗತ್ಯವಾಗಿ ಪುರುಷರ ವಿರುದ್ಧ ದೂರು ನೀಡುವುದನ್ನು ನಿಲ್ಲಿಸಬೇಕಿದೆ. ಏಕೆಂದರೆ ಈಗಾಗಲೇ ಕಳೆದೊಂದು ದಶಕದಲ್ಲಿ ಆಕೆ 10 ಕೇಸು ದಾಖಲಿಸಿದ್ದಾರೆ, 11ನೇ ಪ್ರಕರಣ ದಾಖಲಾಗುವುದನ್ನು ತಡೆಯಬೇಕಿದೆ ಎಂದು ಹೇಳಿರುವ ನ್ಯಾಯಾಲಯ ಎ್ಲ 9 ಪ್ರಕರಣಗಳ ವಿವರಗಳನ್ನು ದಾಖಲು ಮಾಡಿದೆ.
ಹಲವು ಪುರುಷರು ಮತ್ತು ಅವರ ಕುಟುಂಬದವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಮಹಿಳೆ ದಾಖಲಿಸಿದ್ದಾರೆ. ಆಕೆಯ ಉದ್ದೇಶ ಆ ವ್ಯಕ್ತಿಗಳಿಗೆ ಕಿರುಕುಳ ನೀಡುವುದು. ಆದರೆ ಎಲ್ಲ ಪ್ರಕರಣಗಳಲ್ಲಿ ಆರೋಪಿಗಳು ಬಂಧನಕ್ಕೆ ಒಳಗಾಗಿ ನಂತರ ಜಾಮೀನಿನ ಮೇಲೆ ಹೊರಬಂದು ವಿಚಾರಣೆ ಎದುರಿಸಿ ಪ್ರಕರಣದಿಂದ ಮುಕ್ತಾರಾಗಿರವ ಅಂಶ ನ್ಯಾಯಾಲಯ ಗಮನಿಸಿದೆ.
ಆಕೆಯ ನಡೆ ನರಿಯಂತೆ
ಈಗಾಗಲೇ ಮಹಿಳೆಯ ತೆಕ್ಕೆಗೆ 10ಕ್ಕೂ ಅಧಿಕ ಪುರುಷರು ಬಿದ್ದಿದ್ದಾರೆ. ಅವರಲ್ಲಿ ಕೆಲವರದ್ದು ಮದುವೆಯಾಗಿದೆ. ಇನ್ನೂ ಕೆಲವರು ಆಗಿಲ್ಲ, ಆದರೂ ಕೇಸು ಎದುರಿಸುವಂತಾಗಿದೆ. ಹನಿ ಟ್ರ್ಯಾಪ್ ಸ್ವಭಾವದ ಮೂಲಕ ಆಕೆ ಕಾರ್ಯಸಾಧನೆ ಮಾಡುತ್ತಾಳೆ. ಪ್ರತಿ ಪ್ರಕರಣದಲ್ಲೂ ಆಕೆಯ ನಡೆ ನರಿಯಂತೆ ಸಂಶಯಾಸ್ಪದವಾಗಿದೆ. ಕಳೆದೊಂದು ದಶಕದಲ್ಲಿ ಹತ್ತು ಮಂದಿ ವಿರುದ್ಧ ಮದುವೆ ಮಾಡಿಕೊಂಡು ಮೋಸ, ಲೈಂಗಿಕ ದೌರ್ಜನ್ಯ ಹೀಗೆ ಹಲವು ಬಗೆಯ ದೂರುಗಳನ್ನು ದಾಖಲಿಸಿದ್ದಾರೆ. ಆಕೆಯ ಆರೋಪ ಸತ್ಯಕೆ ದೂರವಾದದ್ದು, ಹಾಗಾಗಿ ಪೊಲೀಸರು ನಕಲಿ ಕೇಸುಗಳ ಬಗ್ಗೆ ತನಿಖೆ ನಡೆಸಬೇಕಾಗುತ್ತದೆ.ಇದರಿಂದ ಪೊಲೀಸರ ಹಾಗೂ ನ್ಯಾಯಾಲಯಗಳ ಸಮಯವೂ ವ್ಯರ್ಥವಾಗುತ್ತಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಇಂತಹ ಪ್ರಕರಣಗಳನ್ನು ಹಾಗೆಯೇ ಬಿಟ್ಟರೆ, ಸುಳ್ಳು ಪ್ರಕರಣಗಳನ್ನು ಹೆಚ್ಚುತ್ತವೆ . ಹಾಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.
ದೂರುವ ಅಭ್ಯಾಸ
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮೂರ್ತಿ ಡಿ.ನಾಯಕ್, ಮಹಿಳೆ ಈ ರೀತಿ ಅನಗತ್ಯ ಮತ್ತು ಕ್ಷುಲ್ಲಕ ದೂರುಗಳನ್ನು ನೀಡುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಹಿಂದಿನ 9 ಕೇಸುಗಳ ವಿವರಗಳನ್ನು ಒದಗಿಸಿದರು. ಅರ್ಜಿದಾರರ ವಿರುದ್ಧ ಪ್ರಕರಣ ರದ್ದುಗೊಳಿಸಬೇಕೆಂದು ಕೋರಿದ್ದರು.