ನ್ಯೂಸ್

ಸೇಡಿನ ರಾಜಕಾರಣಕ್ಕೆ ಮುಂದಾದರೆ ಎಚ್ಚರ!

ಕಾಂಗ್ರೆಸ್​ಗೆ ಎನ್​ಡಿಎ ಮುಖಂಡ ಹರಿನಾಥರೆಡ್ಡಿ ವಾರ್ನಿಂಗ್​ | ಠಾಣೆಗೆ ಮುತ್ತಿಗೆ ಹಾಕಲು ನಿರ್ಧಾರ

ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ

ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಅಭಿವೃದ್ಧಿಯತ್ತ ಗಮಹರಿಸುವುದು ಬಿಟ್ಟು ಪೊಲೀಸ್​ ಇಲಾಖೆ ಬಳಸಿಕೊಂಡು ಸಂಸದರ ವಿರುದ್ಧ ಸುಳ್ಳು ಕೇಸು ದಾಖಲಿಸಿ ಆಂಧ್ರಪ್ರದೇಶದ ಮಾದರಿಯಲ್ಲಿ ಸೇಡಿನ ರಾಜಕಾರಣಕ್ಕೆ ಮುಂದಾದರೆ, ಸಂಸದ ಡಾ.ಕೆ.ಸುಧಾಕರ್​ ಬೆಂಬಲಿಗರು ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಪಂಚಾಯತ್​ ಮಾಜಿ ಸದಸ್ಯ, ಎನ್​ಡಿಎ ಮುಖಂಡ ಹರಿನಾಥರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44 ರಲ್ಲಿರುವ ಾಮ್​ರ್ ಹೌಸ್​ನಲ್ಲಿ ಶುಕ್ರವಾರ, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕಿನಲ್ಲಿರುವ ಡಾ. ಸುಧಾಕರ್​ ಬೆಂಬಲಿಗರ ಸಭೆ ನಡೆಯಿತು. ಜಿಪಂ ಹೊರಗುತ್ತಿಗೆ ನೌಕರ, ಜೀಪ್​ ಚಾಲಕ ಬಾಬು ಆತ್ಮಹತ್ಯೆ ಪ್ರಕರಣಕ್ಕೆ ಯಾವ ಸಂಬಂಧವೂ ಇಲ್ಲದ ಸಂಸದ ಡಾ.ಕೆ.ಸುಧಾಕರ್​ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಪ್ರಕರಣದಲ್ಲಿ ಸಂಸದರ ಹೆಸರು ಕೈ ಬಿಡಬೇಕೆಂದು ಒತ್ತಾಯಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹರಿನಾಥರೆಡಿ, ಜಿಪಂ ಹೊರಗುತ್ತಿಗೆ ನೌಕರನ ಸಾವಿಗೂ ನಾಲ್ಕು ದಿನ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಡೆತ್​ ನೋಟ್​ ಆಧಾರಿತವಾಗಿ 8 ಲಕ್ಷ ಮತ ಪಡೆದುಕೊಂಡು ಸಂಸದರಾಗಿ ಆಯ್ಕೆಗೊಂಡಿರುವ ಡಾ.ಕೆ.ಸುಧಾಕರ್​ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆಂದರೆ ಜಿಲ್ಲೆಯ ಜನಸಾಮಾನ್ಯರ ಪರಿಸ್ಥಿತಿ ಹೇಗೆ ಎಂಬ ಪ್ರಶ್ನೆಗೆ ಪೊಲೀಸರು ಮುಂದಿನ ದಿನಗಳಲ್ಲಿ ಉತ್ತರ ನೀಡಬೇಕು ಎಂದರು.ಕಾಂಗ್ರೆಸ್​ ಸಚಿವರ, ಶಾಸಕರ ಕೈಗೊಂಬೆಯಂತೆ ವರ್ತನೆ ಮಾಡುತ್ತಿರುವ ಜಿಲ್ಲೆಯ ಪೊಲೀಸ್​ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಕಾನೂನಿನ ಮುಂದೆ ತಲೆ ತಗ್ಗಿಸಬೇಕಾಗುತ್ತದೆ. ಡಾ.ಕೆ.ಸುಧಾಕರ್​ಗೂ ಆತ್ಮಹತ್ಯೆ ಮಾಡಿಕೊಂಡಿರುವ ಹೊರಗುತ್ತಿಗೆ ನೌಕರ ಬಾಬುಗೂ ಒಂದು ಸಂಭಾಷಣೆ ಕೂಡ ನಡೆದಿಲ್ಲ, ಮಾತುಕತೆ ಇಲ್ಲ, ಪರಿಚಯವೂ ಇಲ್ಲ. ಕೇವಲ ರಾಜಕೀಯ ದುರುದ್ದೇಶ ಇಟ್ಟುಕೊಂಡು ಸಂಸದರ ತೇಜೋವಧೆಗೆ ಮುಂದಾಗಿರುವ ಕಾಂಗ್ರೆಸ್ಸಿಗರ ನಡೆ ಖಂಡನೀಯ ಎಂದು ಹರಿಹಾಯ್ದರು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್​ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ, ಮುಖಂಡರಾದ ಆ.ನ.ಮೂರ್ತಿ, ಎ.ಗೋಪಾಲಕೃಷ್ಣ, ಪಿ.ವಿ.ಮಂಜುನಾಥರೆಡ್ಡಿ, ಎಸ್​.ಆರ್​.ಲ್ಮನಾರಾಯಣ, ಶ್ರೀನಿವಾಸರೆಡ್ಡಿ, ಮಲ್ಲಿಕಾರ್ಜುನ, ಅಶ್ವತ್ಥರೆಡ್ಡಿ, ಬಿಎಸ್​ಎನ್​ಎಲ್​ ವೆಂಕಟೇಶ್​, ಗಣೇಶ್​ರೆಡ್ಡಿ, ಸುನೀಲ್​ ರೆಡ್ಡಿ, ನಂಜಿರೆಡ್ಡಿ, ನಾರಾಯಣ ನಾಯಕ್​, ವಿನೋದರೆಡ್ಡಿ, ಮಂಜುನಾಥ್​, ಸಂಪತ್​ ಇತರರು ಇದ್ದರು.

ಹೋರಾಟದ ಎಚ್ಚರಿಕೆ

ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಪತ್ನಿ ಹಾಗೂ ಪಾಲಕರಿಂದ ಬಲವಂತದ ಹೇಳಿಕೆ ಪಡೆದುಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರ ಆಗಿದೆ. ಹಾಗಾಗಿ ಸಂಸದ ಡಾ.ಕೆ.ಸುಧಾಕರ್​ ಹೆಸರನ್ನು ಪ್ರಕರಣದಿಂದ ಕೈ ಬಿಡದಿದ್ದರೆ ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಿ ಉಗ್ರಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಹರಿನಾಥರೆಡ್ಡಿ ಎಚ್ಚರಿಕೆ ನೀಡಿದರು.

ಚಾಲಕನ ಕೆಲಸಕ್ಕೆ ಅಷ್ಟೊಂದು ಲಂಚ!

ರಾಜ್ಯ ಒಕ್ಕಲಿಗರ ಸಂದ ಪ್ರಧಾನ ಕಾರ್ಯದರ್ಶಿ ಟಿ.ಕೋನಪರೆಡ್ಡಿ ಮಾತನಾಡಿ, ಜೀಪ್​ ಚಾಲಕನ ಕೆಲಸಕ್ಕೆ 40 ಲಕ್ಷ ರೂ. ಲಂಚ ನೀಡುತ್ತಾರೆಂದರೆ ಇದನ್ನು ಯಾರೂ ನಂಬಲು ಸಾಧ್ಯವಿಲ್ಲ. ಜೀಪ್​ ಚಾಲಕ ಬಾಬು ಆತ್ಮಹತ್ಯೆ ಮಾಡಿಕೊಂಡಿರುವುದು ಆ.7 ರಂದು. ಆದರೆ, ಡೆತ್​ನೋಟ್​ ಆ. 4 ರಂದೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದರ ಹಿಂದೆ ಇರುವ ಷಡ್ಯಂತ್ರದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಪೊಲಿಸರು ಕ್ರಮ ಜರುಗಿಸುವುದು ಬಿಟ್ಟು ರಾಜಕೀಯ ತೇಜೊವಧೆಗೆ ಮುಂದಾಗಿರುವ ಕಾಂಗ್ರೆಸ್ಸಿಗರ ಒತ್ತಡಕ್ಕೆ ಮಣಿದು, ಸಂಸದರ ವಿರುದ್ಧ ಪ್ರಕರಣ ದಾಖಲಿಸಿರುವುದು ಸಮಂಜಸವಲ್ಲ ಎಂದರು. ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ ಹೆಸರು ಹೇಳಿಕೊಂಡು ಹಣ ಸುಲಿಗೆ ಮಾಡುವ ಎಷ್ಟೋ ಜನ ಸಮಾಜದಲ್ಲಿ ಇದ್ದಾರೆ. ಅಂತಹವರ ಕೃತ್ಯದಿಂದ ನೊಂದವರು ಪ್ರಧಾನಿ, ಮುಖ್ಯಮಂತ್ರಿ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡರೆ, ತನಿಖೆ ನಡೆಸದೆ ಅವರ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಎರಡು ಬಗೆಯ ಕಾನೂನು ಇದೆಯೇ?

ಮಡಿಕೇರಿಯ ಟನೆಯಲ್ಲಿ ಅಲ್ಲಿನ ಕಾಂಗ್ರೆಸ್​ ಶಾಸಕರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೂ, ಪ್ರಕರಣದಲ್ಲಿ ಕಾಂಗ್ರೆಸ್​ ಶಾಸಕರ ಹೆಸರು ಕೈಬಿಟ್ಟು ಪ್ರಕರಣ ದಾಖಲಿಸಿದ್ದಾರೆ. ಆದರೆ, ಚಿಕ್ಕಬಳ್ಳಾಪುರದ ಈ ಟನೆಯಲ್ಲಿ ಏಕೆ ದ್ವೇಷದಿಂದ ವರ್ತಿಸುತ್ತಿದ್ದಾರೆ? ರಾಜ್ಯದ ಪೊಲೀಸರಿಗೆ ಸಂವಿಧಾನ ಎರಡು ಬಗೆಯ ಕಾನೂನು ವ್ಯವಸ್ಥೆ ಜಾರಿಗೆ ತಂದಿದೆಯೇ ಎಂದು ಕೋನಪರೆಡ್ಡಿ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.