ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಕೇಂದ್ರ ಸಹಕಾರ ಸಚಿವಾಲಯವು ಸ್ಥಾಪನೆಯಾಗಿ 5 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ನಡೆದ ವಿಶೇಷ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಿದರು. 
ನ್ಯೂಸ್

ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತಲೂ ಸಹಕಾರಿ ಬ್ಯಾಂಕ್‌ಗಳಿಂದ ಉತ್ತಮ ಸೇವೆ

ಮಂಗಳೂರು: ದೇಶ ಹಾಗೂ ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ಕ್ಷೇತ್ರವು ಮಹತ್ತರ ಪಾತ್ರ ವಹಿಸುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತಲೂ ಉತ್ತಮ ಸೇವೆ ನೀಡುವ ಮೂಲಕ ಜನಸಾಮಾನ್ಯರ ಮನೆಗೆದ್ದಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಹಾಗೂ ಜಿಲ್ಲಾ ಸಹಕಾರ ಇಲಾಖೆಯ ಸಹಯೋಗದಲ್ಲಿ ಕೇಂದ್ರ ಸಹಕಾರ ಸಚಿವಾಲಯವು ಸ್ಥಾಪನೆಯಾಗಿ 5 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ನಡೆದ ವಿಶೇಷ ಸಹಕಾರ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಸಹಕಾರಿ ಕ್ಷೇತ್ರಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಜನಸ್ಪಂದನೆ ಸಿಗುತ್ತಿದೆ. ಪ್ರಸ್ತುತ ದೇಶಾದ್ಯಂತ ಸುಮಾರು 30 ಕೋಟಿಗೂ ಅಧಿಕ ಜನರು ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ವ್ಯವಹಾರ ನಡೆಸುತ್ತಿದ್ದು, ದೇಶವನ್ನು ಸದೃಢವಾಗಿ ಬೆಳೆಸುವ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ. ಕರ್ನಾಟಕ ರಾಜ್ಯವೊಂದರಲ್ಲೇ 47 ಸಾವಿರಕ್ಕೂ ಹೆಚ್ಚು ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ತಳಮಟ್ಟದ ಜನರಿಗೆ ಅತ್ಯುತ್ತಮ ಮತ್ತು ಕರಾರುವಕ್ಕಾದ ಸೇವೆ ಒದಗಿಸುತ್ತಿವೆ. ಈ ಮೂಲಕ ಇವು ರಾಷ್ಟ್ರೀಕೃತ ಬ್ಯಾಂಕ್‌ಗಳ ಕಾರ್ಯವೈಖರಿಗೇ ನೇರ ಸವಾಲು ಹಾಕುವ ಮಟ್ಟಿಗೆ ಬೆಳೆದು ನಿಂತಿವೆ.
ಸಹಕಾರ ಧ್ವಜಾರೋಹಣ ನೆರವೇರಿಸಿದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಸೇವೆ ರಾಜ್ಯದಲ್ಲಿಯೇ ಉತ್ತಮವಾಗಿದ್ದು, ಅದನ್ನು ಮುಕ್ತ ಕಂಟದಿಂದ ಶ್ಲಾಘಿಸಬೇಕು. ಸಹಕಾರಿ ಚಳುವಳಿಯ ಬಳಿಕ ಅಭೂತಪೂರ್ವ ಬೆಳವಣಿಗೆಯನ್ನು ಕಂಡ ಸಹಕಾರಿ ಕ್ಷೇತ್ರ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮೋದಿಯವರ 2047ರ ವಿಕಸಿತ ಭಾರತದ ಕಲ್ಪನೆಗೆ ಸಹಕಾರಿ ಕ್ಷೇತ್ರಗಳ ಕೊಡುಗೆ ಅಪಾರ. ಜಿಲ್ಲೆಯಲ್ಲಿ ಎಂಎನ್ ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಸಾಕಷ್ಟು ಉತ್ತಮ ಕೆಲಸಗಳಾಗುತ್ತಿದ್ದು, ಮಹಿಳೆಯರ ಸಬಲೀಕರಣದೊಂದಿಗೆ ಅವರನ್ನು ಮುನ್ನೆಲೆಗೆ ತರುವಂತಹ ಮಹತ್ತರ ಕೆಲಸವನ್ನು ಮಾಡುತ್ತಿದ್ದಾರೆ. ಸಹಕಾರಿ ಬ್ಯಾಂಕ್‌ಗಳು ಗ್ರಾಮೀಣ ಮಟ್ಟದಲ್ಲೂ ಹೆಸರು ಮಾಡಿದ್ದು, ಮೊಬೈಲ್ ಬ್ಯಾಂಕಿಂಗ್ ಮೂಲಕ ಸುಲಭವಾಗಿ ಜನರನ್ನು ತಲುಪುತ್ತಿವೆ ಎಂದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಜಕಕರ ಶೆಟ್ಟಿ ಬಿ. ಇಂದ್ರಾಳಿ, ದ.ಕ. ಸಹಕಾರ ಸಂಘಗಳ ಉಪನಿಬಂಧಕ ಹೆಚ್.ಎನ್. ರಮೇಶ್, ಬ್ಯಾಂಕಿನ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಐಕಳ, ವಿಶ್ವಕರ್ಮ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಹರೀಶ್ ಆಚಾರ್ಯ ಮಾತನಾಡಿದರು.
ಬ್ಯಾಂಕಿನ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ. ಸೇರಿದಂತೆ ಬ್ಯಾಂಕ್‌ನ ನಿರ್ದೇಶಕರುಗಳು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ವಿ. ಹಿರೇಮಠ ವಂದಿಸಿದರು.
ಕೇವಲ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರ ಮಾತ್ರವಲ್ಲದೆ, ಕೃಷಿ ಪೂರಕ ಚಟುವಟಿಕೆಗಳಾದ ಹಾಲು ಉತ್ಪಾದನೆಯಲ್ಲಿ ದಿನೇ ದಿನೇ ಗಣನೀಯ ಏರಿಕೆ ಕಂಡುಬರುತ್ತಿದೆ. ಜೇನುಸಾಕಣೆ ಯಲ್ಲಿಯೂ ಸಹಕಾರಿ ಕ್ಷೇತ್ರವು ಮುಂಚೂಣಿಯಲ್ಲಿ ನಿಂತು ಸಾಧನೆಯ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ದೇಶದ ವ್ಯವಹಾರದಲ್ಲಿ 30 ಕೋಟಿ ಜನ ಸಹಕಾರಿ ಕ್ಷೇತ್ರದಲ್ಲಿ ವ್ಯವಹಾರ ನಡೆಸುತ್ತಿದ್ದು, ಇದು ರಾಜ್ಯ, ದೇಶವನ್ನು ಬೆಳೆಸುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ ಇಟ್ಟಿದೆ.
-ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್,
ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ