ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಕೆಲವು ನಾಯಕರೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಕಾರಣ ಸೋಲು ಅನುಭವಿಸಬೇಕಾಯಿತು ಎಂಬ ‘ಸ್ಪೋಟಕ’ ವರದಿ ಪಕ್ಷದ ವರಿಷ್ಠರಿಗೆ ಸಲ್ಲಿಕೆಯಾಗಿದೆ. ಫಲಿತಾಂಶದ ಕುರಿತು ತನಿಖೆ ನಡೆಸಿ ವರಿಷ್ಠರಿಗೆ ಸಮಗ್ರ ವರದಿ ಸಲ್ಲಿಸಲಾಗಿದ್ದು, ಇದರಲ್ಲಿನ ಕೆಲ ಅಂಶಗಳು ವರಿಷ್ಠರ ಅಸಹನೆಗೆ ಕಾರಣವಾಗಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕೆಲವು ಸಚಿವರೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರಿಂದ ನಿರಾಯಾಸ ಗೆಲುವು ಕೈತಪ್ಪಿದೆ. ಅನೇಕ ಕಡೆ ದೊಡ್ಡ ಪ್ರಮಾಣದ ಹಿನ್ನಡೆಗೂ ಇದೇ ಪ್ರಮುಖ ಕಾರಣವೆಂದು ವರದಿ ಬೊಟ್ಟು ಮಾಡಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಬೆಂಬಲಿತರು ಹೆಚ್ಚಿನ ಪ್ರಮಾಣದಲ್ಲಿ ಗೆಲ್ಲುವುದಕ್ಕೆ ನಿರಂತರ ಸಂಘಟನಾ ಚಟುವಟಿಕೆ, ಕಾರ್ಯಕರ್ತರ ಹುರುಪು ನೆರವಾಯಿತು. ಇದೇ ಪ್ರಯತ್ನ ಮೇಲ್ಮನೆ ಚುನಾವಣೆಯಲ್ಲಿ ಸಾಧ್ಯವಾಗಲಿಲ್ಲ. ಸಚಿವರು, ಶಾಸಕರು ಹಾಗೂ ತಳ ಹಂತದ ಕಾರ್ಯಕರ್ತರ ಮಧ್ಯೆ ನಿಕಟತೆ ಬೆಸೆದುಕೊಳ್ಳದೆ ಪರಾಭವಕ್ಕೆ ದಾರಿ ಮಾಡಿಕೊಟ್ಟರು ಎಂದು ವರದಿಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ.
ಅಡ್ಡ ಮತದಾನ: ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶಿತ ಸದಸ್ಯರೇ ಕೆಲವು ಕಡೆಗಳಲ್ಲಿ ‘ಅಡ್ಡಮತದಾನ’ ಮಾಡಿದ್ದು, ಸರ್ಕಾರ ಮತ್ತು ಪಕ್ಷದ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿತು. ಬೆಳಗಾವಿ ದ್ವಿಸದಸ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ 11 ಶಾಸಕರು, ಮೂವರು ಸಂಸದರು, ಒಬ್ಬ ರಾಜ್ಯಸಭೆ ಸದಸ್ಯರು, ಇಬ್ಬರು ಸಚಿವರು, ಮಾಜಿ ಡಿಸಿಎಂ, ಮಾಜಿ ಸಚಿವರಿಂದ ಭದ್ರಕೋಟೆಯಾಗಿದೆ. ಆದರೆ ಕೆಲವು ಪ್ರಭಾವಿಗಳು ಪಕ್ಷಕ್ಕಿಂತಲೂ ವೈಯಕ್ತಿಕ ಪ್ರತಿಷ್ಠೆಗೆ ಮಣೆ ಹಾಕಿದ್ದು ಸೋಲಿನ ಕಹಿಯುಣಿಸಿದೆ.
ಮೈಸೂರಿನ ಪರಾಜಯವು ಮತ್ತೊಂದು ಆಘಾತಕಾರಿ ಅಂಶವನ್ನು ಹೊರಗೆಡವಿದೆ. ಎರಡನೇ ಪ್ರಾಶಸ್ಱದ ಮತದ ಬಗ್ಗೆ ಜಾಗೃತಿ ಮೂಡಿಸದಿರುವುದು ಮೊದಲ ವೈಫಲ್ಯ. ಅಭ್ಯರ್ಥಿ ರಘು ಕೌಟಿಲ್ಯ ಮಡಿವಾಳ ಸಮುದಾಯಕ್ಕೆ ಸೇರಿದವರು. ಅವರ ಸೋಲಿನಿಂದಾಗಿ ಸಣ್ಣ ಜಾತಿಗಳ ರಾಜಕೀಯ ಪ್ರಾಬಲ್ಯ ಸೋಲಿಸಲಾಗಿದೆ ಎಂಬ ಆಪಾದನೆ ಪಕ್ಷಕ್ಕೆ ಅಂಟಿಕೊಂಡಿದೆ. ಸಣ್ಣ ಸಮುದಾಯಗಳನ್ನು ಒಗ್ಗೂಡಿಸುವ ಭರದಲ್ಲಿ ಇತರ ಬಹುಸಂಖ್ಯಾತ, ಬಲಿಷ್ಠರ ವರ್ಗ ಮತ್ತು ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಮುಗ್ಗರಿಸಿದ್ದೂ ಎರಡನೇ ವೈಫಲ್ಯ. ಕೇಂದ್ರ-ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷವೆಂಬ ಅತಿಯಾದ ಆತ್ಮವಿಶ್ವಾಸ, ಒಗ್ಗಟ್ಟಿನ ಕೊರತೆ, ಪರಸ್ಪರ ಅಪಂಬಿಕೆ, ಸಚಿವರು ಮತ್ತು ಶಾಸಕರ ನಿರಾಸಕ್ತಿ, ‘ಹೊಂದಾಣಿಕೆ ರಾಜಕಾರಣ’ವೇ ಮೇಲ್ಮನೆಯಲ್ಲಿ ಮೇಲುಗೈ ಸಾಧಿಸುವ ಅವಕಾಶಗಳನ್ನು ಕಸಿದುಕೊಂಡಿದೆ ಎಂಬ ವಿವರಗಳು ವರದಿಯಲ್ಲಿದೆ ಎನ್ನಲಾಗಿದೆ. ಬೆಚ್ಚಿಬೀಳಿಸುವ ಅನೇಕ ಸಂಗತಿಗಳು ದೆಹಲಿ ನಾಯಕರ ಕಣ್ಣು ಕೆಂಪಾಗಿಸಿದ್ದು, ಈ ವರದಿ ಅನ್ವಯ ಪಕ್ಷದ ರಾಜ್ಯ ಉಸ್ತುವಾರಿ, ಸಚಿವರು, ಶಾಸಕರು ಹಾಗೂ ರಾಜ್ಯ ನಾಯಕರಿಂದ ಸ್ಪಷ್ಟ ಸಮಜಾಯಿಷಿ ಕೇಳುವ ಮೂಲಕ ಬಿಸಿ ಮುಟ್ಟಿಸಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು: ಸಂಕ್ರಾಂತಿ ಬಳಿಕ ಸಂಪುಟಕ್ಕೆ ಸರ್ಜರಿಯಾಗಲಿದೆ ಎಂಬ ನಿರೀಕ್ಷೆಗಳ ನಡುವೆ ಚಿಂತನ ಬೈಠಕ್ ನಿಗದಿಯಾಗಿರುವುದು ಹಲವು ಸಚಿವರಲ್ಲಿ ‘ಚುನಾವಣಾ ಸಂಪುಟ’ದ ನಡುಕ ಹುಟ್ಟಿಸಿದೆ. ಹಿರಿಯರು ಹಾಗೂ ದೀರ್ಘ ಕಾಲ ಅಧಿಕಾರ ಅನುಭವಿಸಿದವರನ್ನು ಕೈಬಿಡಬೇಕು. ಗುಜರಾತ್ ಮಾದರಿಯನ್ನೇ ಅನುಸರಿಸಬೇಕು ಎಂಬ ಚರ್ಚೆಗಳು ಮುನ್ನೆಲೆಗೆ ಬಂದು ಹಲವರ ನಿದ್ದೆಗೆಡಿಸಿದೆ. ನಂದಿಬೆಟ್ಟ ಸಮೀಪದ ರೆಸಾರ್ಟ್ವೊಂದರಲ್ಲಿ ಜ.7 ರಿಂದ 9ರವರೆಗೆ ಚಿಂತನ ಬೈಠಕ್ ನಡೆಯಲಿದೆ. ಇದು ಸರ್ಕಾರ ಮತ್ತು ಪಕ್ಷದೊಳಗೆ ಹಲವು ಲೆಕ್ಕಾಚಾರಕ್ಕೆ ಗ್ರಾಸವಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನೇರ ಅಥವಾ ವರ್ಚುವಲ್ ವೇದಿಕೆ ಮೂಲಕ ಸಚಿವರ ಚಿಂತನ ಬೈಠಕ್ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಅನೇಕ ಜನಪ್ರಿಯ ಹಾಗೂ ಮಹತ್ವದ ಯೋಜನೆಗಳನ್ನು ಪ್ರಕಟಿಸಿದರೂ ಜನರ ಗಮನ ಸೆಳೆದಿಲ್ಲ. ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಮೂರು ಚುನಾವಣೆಗಳಲ್ಲಿ ಪಕ್ಷ ನಿರೀಕ್ಷಿತ ಫಲಿತಾಂಶ ಪಡೆದಿಲ್ಲ. ಇವೆಲ್ಲವೂ ಭೈಠಕ್ನಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿವೆ.
ವರಿಷ್ಠರ ಚಿಂತೆಗೆ ಕಾರಣಗಳು: ಪ್ರತಿಪಕ್ಷಗಳ ಆರೋಪ, ಆಕ್ರಮಣಕಾರಿ ಧೋರಣೆಗಳೇ ಸದ್ಯ ಮೇಲುಗೈ ಸಾಧಿಸಿದ್ದು, ಸರ್ಕಾರ ಉತ್ತಮ ಕೆಲಸ ಮಾಡುತ್ತಿದ್ದರೂ ಜನಾಭಿಪ್ರಾಯ ರೂಪುಗೊಂಡಿಲ್ಲ ಎನ್ನುವುದು ವರಿಷ್ಠರನ್ನು ಚಿಂತೆಗೀಡು ಮಾಡಿದೆ. ಸರ್ಕಾರ ಮತ್ತು ಪಕ್ಷವನ್ನು ಸುತ್ತುವರಿದಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು, ಮುಂದಿನ ಚುನಾವಣೆಗೆ ಕ್ರಿಯಾಶೀಲ ಹಾಗೂ ಪಕ್ಷದ ವಿಚಾರಧಾರೆಗೆ ಕಟಿಬದ್ಧ ತಂಡವನ್ನು ಸಜ್ಜುಗೊಳಿಸಲಿದೆ. ಈ ನಿಟ್ಟಿನಲ್ಲಿ ಸಚಿವರ ಕಾರ್ಯಕ್ಷಮತೆ ಮೌಲ್ಯಮಾಪನ ಬೈಠಕ್ನ ಮುಖ್ಯ ಕಾರ್ಯಸೂಚಿಯಾಗಿದ್ದು, ಡಬಲ್ ಗೇಮ್ ಆಡುವ ಮಂತ್ರಿಗಳಿಗೆ ವರಿಷ್ಠರು ಚಾಟಿ ಬೀಸಲಿದ್ದಾರೆ ಎನ್ನಲಾಗುತ್ತಿದೆ. ಪಕ್ಷ ನಿಷ್ಠೆ, ಸಚಿವ ಸ್ಥಾನದ ಜವಾಬ್ದಾರಿ ನಿರ್ವಹಿಸಿದ ರೀತಿ ಎಲ್ಲವನ್ನು ಅಳೆದುತೂಗಿ ನೋಡಿದ ಬಳಿಕ ಪ್ರತಿಯೊಬ್ಬ ಮಂತ್ರಿಗೆ ಶ್ರೇಯಾಂಕ ನೀಡಲಿದೆ. ಈ ಶ್ರೇಯಾಂಕವೇ ಸಚಿವರ ಭವಿಷ್ಯ ನಿರ್ಧರಿಸಲಿದೆ ಎಂದು ಮೂಲಗಳು ಹೇಳಿವೆ.
3 ದಿನದ ಬೈಠಕ್: ಸದ್ಯದ ರೂಪರೇಷೆ ಪ್ರಕಾರ ಜ.7ರ ಸಂಜೆ ರಾಜ್ಯ ಸಮಿತಿ ಪದಾಧಿಕಾರಿ ಗಳೊಂದಿಗೆ ಬೈಠಕ್, ಜ. 8ರಂದು ಇಡೀ ದಿನ ಸಚಿವರ ಜತೆಗೆ ಚಿಂತನ ಬೈಠಕ್ ಹಾಗೂ ಜ. 9ರಂದು ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆ ನಡೆಯಲಿದೆ. ಎರಡು ಹಂತದ ಬೈಠಕ್ಗಳಲ್ಲಿ ಸಿದ್ಧವಾದ ಕಾರ್ಯಯೋಜನೆ ಹಾಗೂ ಚುನಾವಣೆ ದೃಷ್ಟಿಕೋನದ ತಂತ್ರಗಾರಿಕೆಗೆ ಕೋರ್ ಕಮಿಟಿ ಸಭೆಯು ರ್ಚಚಿಸಿ ಅಂತಿಮ ಸ್ಪರ್ಶ ನೀಡಲಿದೆ. ವರಿಷ್ಠರ ಆಣತಿಯಂತೆ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆ ರೂಪಿಸುವ ಸೂತ್ರಗಳ ಅನುಷ್ಠಾನದ ಪೂರ್ಣ ಜವಾಬ್ದಾರಿ ಬೊಮ್ಮಾಯಿ ಸಂಪುಟ ಸಹೋದ್ಯೋಗಿಗಳ ಹೆಗಲೇರಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.