ಬೆಂಗಳೂರು: ಇತ್ತೀಚೆಗೆ ಪ್ರಾಂಶುಪಾಲರೊಬ್ಬರು 10 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಪಾಲಕರ ಕೆಂಗಣ್ಣಿಗೆ ಗುರಿಯಾಗಿದ್ದ ಅನಧಿಕೃತ ವರ್ತೂರಿನ ಬೆತಲ್ ಬ್ಯಾಪಿಸ್ಟ್ ಅಕಾಡೆಮಿ ಶಾಲೆಯನ್ನು ಬಂದ್ ಮಾಡಲಾಗಿದೆ.
ಈ ಶಾಲೆಯು ಕೋರಮಂಗಲದಲ್ಲಿ 1ರಿಂದ 5ನೇ ತರಗತಿವರೆಗೂ ನಡೆಸಲು ಅಧಿಕೃತವಾಗಿ ಅನುಮತಿ ಪಡೆದಿದೆ. ವರ್ತೂರಿನಲ್ಲಿ ಅನಧಿಕೃತವಾಗಿ 1ರಿಂದ 8ನೇ ತರಗತಿವರೆಗೂ ಶಾಲೆಯನ್ನು ನಡೆಸುತ್ತಿತ್ತು. ಇತ್ತೀಚೆಗಷ್ಟೇ ಶಾಲೆಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಇದೇ ವೇಳೆಗೆ ಶಾಲೆಯ ಆಡಳಿತ ಮಂಡಳಿ ನಿರ್ದೇಶಕರೂ ಆಗಿದ್ದ ಪ್ರಾಂಶುಪಾಲ 2ನೇ ತರಗತಿ ಮಗುವಿಗೆ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿತ್ತು.
ಶಾಲೆಯನ್ನು ಅನಧಿಕೃತವಾಗಿ ನಡೆಸುವುದರ ಜತೆಗೆ ಮಗುವಿನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಪ್ರಾಂಶುಪಾಲರ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಶಾಲೆಯ ಮೇಲೆಯೂ ಎ್ಐಆರ್ ದಾಖಲಿಸಿ ಶಾಲೆಯನ್ನು ಮುಚ್ಚಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಡಿಡಿಪಿಐ ಲಿಂಗರಾಜಪ್ಪ ತಿಳಿಸಿದ್ದಾರೆ.
ಸಮೀಪದ ಶಾಲೆಗೆ ಮಕ್ಕಳ ದಾಖಲಾತಿ:
ಶಾಲೆಯಲ್ಲಿ 80ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದು, ಸಂಬಂಧಪಟ್ಟ ಪಾಲಕ/ಪೋಷಕರೊಂದಿಗೆ ಚರ್ಚಿಸಿ ಮಕ್ಕಳನ್ನು ಸಮೀಪದ ಶಾಲೆಗೆ ದಾಖಲಿಸಲಾಗುತ್ತಿದೆ. ಇಲ್ಲಿಯವರೆಗೂ ಅಂದಾಜು 30ಕ್ಕೂ ಹೆಚ್ಚಿನ ಮಕ್ಕಳನ್ನು ವಿವಿಧ ಶಾಲೆಗೆ ದಾಖಲಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಎಲ್ಲ ಮಕ್ಕಳನ್ನೂ ಸಮೀಪದ ಶಾಲೆಗಳಿಗೆ ದಾಖಲಿಸುವ ಮೂಲಕ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಾಂಶುಪಾಲರ ವಿರುದ್ಧ ಆ.3ರಂದು ಪ್ರಕರಣ ದಾಖಲಿಸಲಾಗಿತ್ತು. ಅಲ್ಲದೆ, ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಮಕ್ಕಳ ಹಕ್ಕುಗಳನ್ನು ರಕ್ಷಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ರಾಜಕೀಯವಾಗಿಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.