ಕೊಳ್ಳೇಗಾಲ: ಪಟ್ಟಣದ ಬಾಪುನಗರದ ಕೊಳ್ಳೇಗಾಲ ಟೌನ್ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಪಟ್ಟಣ ಠಾಣೆಯ ಪೊಲೀಸ್ ಸಿಬ್ಬಂದಿ ಆಪ್ತ ಗೆಳತಿ ಕಾರ್ಯಕ್ರಮ ನಡೆಸಿದರು.
ಶಾಲೆಗೆ ಪಟ್ಟಣ ಪೊಲೀಸ್ ಠಾಣೆಯ ಹೆಡ್‌ಕಾನ್ಸ್ ಟೇಬಲ್ ರಾಧಾ, ಕೆ.ಮಾದೇಶ್, ಕಾನ್ಸ್‌ಟೇಬಲ್ ಮಾಯಣ್ಣ, ಶಿವಮಂಜು, ಮಾದೇಶ್ ಅವರು ಶಾಲೆ ವಿದ್ಯಾರ್ಥಿನಿಯರಿಗೆ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಇರುವ ಆಪ್ತ ಗೆಳತಿ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು. ಶಾಲೆಯ ಹೊರಗೆ ಹಾಗೂ ಒಳಗೆ ವಿದ್ಯಾರ್ಥಿನಿಯರಿಗೆ ಆಗುತ್ತಿರುವ ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ ಎಂಬುದಾಗಿ ತಿಳಿಸುತ್ತಾ ಈ ಕಾರ್ಯಕ್ರಮದ ಉದ್ದೇಶವನ್ನು ಬಹಳ ವಿಸ್ತಾರವಾಗಿ ತಿಳಿಸಿಕೊಟ್ಟರು. ಅಲ್ಲದೆ, ಶಾಲೆಯ ವಿದ್ಯಾರ್ಥಿನಿಯರು ನಿರ್ಭಯವಾಗಿ ಕಲಿಕೆಯಲ್ಲಿ ತೊಡಗಿ ಜ್ಞಾನವಿಕಾಸ ಮಾಡಿಕೊಳ್ಳುವಂತೆ ತಿಳಿಸಿದರು.
ಮುಖ್ಯ ಶಿಕ್ಷಕಿ ಮಂಜುಳಾ ಮಾತನಾಡಿ, ಸಂಜೆಯಾಗುತ್ತಿದ್ದಂತೆ ಶಾಲಾವರಣದಲ್ಲಿ ಕುಡುಕರ ಹಾವಳಿ ಹೆಚ್ಚಿದ್ದು ಮದ್ಯಪಾನದ ಪೌಚ್ ಗಳು ಹಾಗೂ ಬಾಟಲಿಗಳನ್ನು ಶಾಲಾವರಣದಲ್ಲಿ ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಇದರಿಂದ ಶಾಲಾ ಪರಿಸರ ಹಾಳಾಗುತ್ತಿದೆ ಈ ನಿಟ್ಟಿನಲ್ಲಿ ತಾವು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಸಹ ಶಿಕ್ಷಕರು ಶಾಲೆಯಲ್ಲಿನ ಹೆಣ್ಣು ಮಕ್ಕಳು ಉಪಸ್ಥಿತರಿದ್ದರು.