ನ್ಯೂಸ್

ಸಂಪಾದಕೀಯ| ಉತ್ತಮ ನಿರ್ಧಾರ

Webdesk - Manjunatha B

ಶಿಕ್ಷಣಪ್ರಾಪ್ತಿಯ ಬಳಿಕ ಉದ್ಯೋಗ ಪಡೆದುಕೊಂಡು, ಉತ್ತಮ ಬದುಕು ರೂಪಿಸಿಕೊಳ್ಳಬೇಕೆಂಬ ಕನಸು ಬಹುತೇಕರಲ್ಲಿ ಇರುತ್ತದೆ. ಅದರಲ್ಲೂ, ಯುವಸಮುದಾಯ ಪದವಿ ಅಥವಾ ಸ್ನಾತಕೋತ್ತರ ಪದವಿಯ ನಂತರ ಉದ್ಯೋಗಬೇಟೆಗಾಗಿಯೇ ಹಲವು ವರ್ಷಗಳನ್ನು ವ್ಯಯಿಸುವಂತಾಗಿದ್ದು, ಬದುಕು ಕಟ್ಟಿಕೊಳ್ಳುವ ಹಂತದಲ್ಲಿ ಬಹುಮೂಲ್ಯ ಸಮಯ ಕಳೆದುಹೋಗುತ್ತಿದೆ. ಅವಕಾಶಗಳು ಎಲ್ಲಿವೆ, ಯಾರನ್ನು, ಹೇಗೆ ಸಂರ್ಪಸಬೇಕು ಎಂಬ ಗೊಂದಲಗಳು ಕೂಡ ಉದ್ಯೋಗಾಕಾಂಕ್ಷಿಗಳಿಗೆ ಕಾಡುವುದುಂಟು. ಸರ್ಕಾರಿ ಉದ್ಯೋಗಪ್ರಾಪ್ತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ವಿವಿಧ ಹಂತದ ತಯಾರಿಗಳನ್ನು ಮಾಡಿಕೊಳ್ಳುತ್ತಾರೆ. ಆದರೆ, ಪರೀಕ್ಷೆ ಬರೆಯುವ, ಅರ್ಜಿ ತುಂಬುವ ಲಕ್ಷಾಂತರ ಅಭ್ಯರ್ಥಿಗಳಲ್ಲಿ ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವುದು ಅಸಾಧ್ಯದ ಮಾತು. ಹಾಗಾಗಿ, ಉಳಿದವರು ಮತ್ತೆ ಖಾಸಗಿ ರಂಗದತ್ತ ವಾಲಬೇಕು, ಅಲ್ಲಿ ಅವಕಾಶಗಳನ್ನು ಕಂಡುಕೊಂಡು, ವೃತ್ತಿಬದುಕು ರೂಪಿಸಿಕೊಳ್ಳುವುದು ಅಗತ್ಯ. ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಖಾಸಗಿ ಕಂಪನಿಗಳು, ದೊಡ್ಡ ಉದ್ಯಮಗಳು ಕಾಲಕಾಲಕ್ಕೆ ಉದ್ಯೋಗ ಮೇಳ ನಡೆಸುವುದು ಗೊತ್ತೇ ಇದೆ. ಆದರೆ, ಹೆಚ್ಚುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೇ ಮೊದಲ ಬಾರಿಗೆ ಉದ್ಯೋಗ ಮೇಳ ಆಯೋಜಿಸುತ್ತಿದೆ. ನಿಜಕ್ಕೂ ಇದು ಉತ್ತಮವಾದ ನಿರ್ಧಾರ. ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳ ಆಯೋಜಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಉದ್ಯೋಗ ಮೇಳ ಯಶಸ್ವಿಯಾಗಿಸಲು ಹಲವು ಸಚಿವರನ್ನು ಒಳಗೊಂಡ ತಂಡವನ್ನೂ ರಚಿಸಲಾಗಿದೆ. ಈ ತಂಡವು ಉದ್ಯೋಗದಾತರೊಂದಿಗೆ ಸಭೆ ನಡೆಸಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲಿದೆ ಹಾಗೂ ವಿದೇಶದಲ್ಲಿರುವ ಉದ್ಯೋಗಾವಕಾಶಗಳ ಕುರಿತೂ ಪರಿಶೀಲಿಸಲಿದೆ. ಹೊಸ ಉದ್ಯೋಗ ನೀತಿ ತರಲು ಮುಂದಾಗಿರುವ ರಾಜ್ಯ ಸರ್ಕಾರ, ಕೈಗಾರಿಕೆಗಳೊಂದಿಗೆ ರ್ಚಚಿಸಿ, ಉದ್ಯೋಗಾಕಾಂಕ್ಷಿಗಳ ಕೌಶಲ ಹಾಗೂ ಕೈಗಾರಿಕೆಗಳ ಅಗತ್ಯಗಳ ನಡುವಿನ ಅಂತರ ಸರಿಪಡಿಸುವ ಬಗ್ಗೆ ದೂರಗಾಮಿ ಕಾರ್ಯಕ್ರಮಗಳನ್ನು ರೂಪಿಸಲಿದೆ.

ಈ ಕ್ರಮದಿಂದ ಹಲವು ಪ್ರಯೋಜನ. ಖಾಸಗಿ ವಲಯ ಮತ್ತು ಉದ್ಯೋಗಾಕಾಂಕ್ಷಿಗಳ ನಡುವಿನ ಸೇತುವೆಯಾಗಿ ಸರ್ಕಾರ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ಕೈಗಾರಿಕೆಗಳ ಅಗತ್ಯಗಳು, ಅದಕ್ಕೆ ತಕ್ಕದಾದ ಕೌಶಲಭರಿತ ಮಾನವ ಸಂಪನ್ಮೂಲ ಒದಗಿಸಲು ಪೂರಕವಾಗಲಿದೆ. ಕೆಲಸದ ಹುಡುಕಾಟದಲ್ಲಿರುವವರು ಅರ್ಹತೆ, ಪ್ರತಿಭೆಗೆ ತಕ್ಕಂತೆ ಒಳ್ಳೆಯ ಹುದ್ದೆ, ಉತ್ತಮ ಸಂಬಳ ಪಡೆಯಲು ಶಕ್ಯವಾಗಲಿದೆ. ಆದರೆ, ಇಂಥ ಉದ್ಯೋಗ ಮೇಳವನ್ನು ಕಾಲಕಾಲಕ್ಕೆ ನಡೆಸಿದರೆ ಮಾತ್ರ ಅದರಿಂದ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲು ಸಾಧ್ಯ. ಉದ್ಯೋಗ ಮೇಳ ರಾಜಧಾನಿಯಲ್ಲಿ ಯಶಸ್ವಿಯಾದ ನಂತರ ವಿಭಾಗೀಯ ಕೇಂದ್ರಗಳಲ್ಲಿ ಆಯೋಜಿಸಲು ಚಿಂತನೆ ನಡೆಸಬೇಕು. ಒಟ್ಟಾರೆ, ಯುವ ಸಮುದಾಯದ ಕೈಗೆ ಕೆಲಸ ನೀಡಿದರೆ ಅವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ. ಜತೆಗೆ ಖಾಸಗಿ ರಂಗಕ್ಕೂ ಮಾನವ ಸಂಪನ್ಮೂಲದ ಕೊರತೆ ನಿವಾರಿಸಿದಂತಾಗುತ್ತದೆ.