ನ್ಯೂಸ್

ಬೆಂಗಳೂರು ಸಿಟಿ ಪೊಲೀಸರಿಂದ ವಿಭಿನ್ನ ಟ್ವೀಟ್​...; ಸುಮ್ಮಸುಮ್ಮನೆ ಓಡಾಡೋರಿಗೆ ವಿಚಿತ್ರವಾಗಿ ವಾರ್ನ್​ ಮಾಡಿದ ಆರಕ್ಷಕರು..!

ಕರೊನಾ ವೈರಸ್​ನ ಗಂಭೀರ ಪರಿಣಾಮದ ಬಗ್ಗೆ ಬೆಂಗಳೂರು ಸಿಟಿ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ನಿರಂತರವಾಗಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಲಾಕ್​ಡೌನ್ ಇದೆ, ಹೊರಗೆ ಓಡಾಡಬೇಡಿ..ಹಾಗೆ ಹೊರಗೆ ಓಡಾಡುವುದರಿಂದ ಅಪಾಯವನ್ನು ನೀವೇ ತಂದುಕೊಳ್ಳುತ್ತೀರಿ ಎಂಬರ್ಥದ ಪೋಸ್ಟ್​ಗಳನ್ನು ಬಹುದಿನಗಳಿಂದಲೂ ಹಾಕುತ್ತ ಬರುತ್ತಿದ್ದಾರೆ.

ಆದರೆ ಬೆಂಗಳೂರಿನಲ್ಲಿ ಜನರ ಓಡಾಟ ನಿಯಂತ್ರಣಕ್ಕೆ ಬರುತ್ತಿಲ್ಲ. ಒಂದಲ್ಲ ಒಂದು ನೆಪವನ್ನೊಡ್ಡಿ ಜನರು ಸಂಚರಿಸುತ್ತಲೇ ಇದ್ದಾರೆ. ಮೇ 3ರ ಬಳಿಕ ಲಾಕ್​ಡೌನ್​ನಲ್ಲಿ ಸಡಿಲಿಕೆ ಇದ್ದರೂ ಬೆಂಗಳೂರಿನಲ್ಲಿ ಯಥಾ ಸ್ಥಿತಿಯಲ್ಲೇ ಮುಂದುವರಿಯಲಿದೆ ಎಂದು ಸರ್ಕಾರ ತಿಳಿಸಿದೆ.

ಇಷ್ಟಾದರೂ ಈಗ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಸಂಚಾರ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಈ ಮಧ್ಯೆ ಬೆಂಗಳೂರು ಸಿಟಿ ಪೋಲೀಸರು ಒಂದು ವಿಭಿನ್ನ ಟ್ವೀಟ್ ಮಾಡಿದ್ದಾರೆ.

'ನಿಮಗೆ ಫೋನ್​ ಮಾಡುವ ಅಪರಿಚಿತರೆಲ್ಲ ಬೆಳದಿಂಗಳ ಬಾಲೆ ಆಗಿರೋದಿಲ್ಲ..ಎಚ್ಚರ' ಎಂದು ಅನಂತ್ ನಾಗ್​ ಅವರು ಫೋನ್ ಹಿಡಿದುಕೊಂಡಿರುವ ಫೋಟೋದ ಮೇಲೆ ಬರೆದು, ಅದನ್ನು ಪೋಸ್ಟ್​ ಮಾಡಿದ್ದಾರೆ. ಹಾಗೇ ಹೌದು..ಸ್ವಾಮಿ ! ಎಂದು ಕ್ಯಾಪ್ಷನ್​ ಕೂಡ ಬರೆದು, #StayHomeStaySafe ಎಂಬ ಹ್ಯಾಷ್​ಟ್ಯಾಗ್​ ಕೊಟ್ಟಿದ್ದಾರೆ.

ಅರೆ, ಇದೆಂಥಾ ಟ್ವಿಟರ್​ ಪೋಸ್ಟ್​ ಎಂದು ಗೊಂದಲ ಬೇಡ. ಕರೊನಾ ಸೋಂಕು ಇರುವವರಿಗೆ ಆರೋಗ್ಯ ಇಲಾಖೆಯಿಂದ ಅಪರಿಚಿತ ನಂಬರ್​ನಲ್ಲಿ ಫೋನ್ ಮಾಡಲಾಗುತ್ತದೆ. ಹಾಗೇ ನೀವು ಬೇಕಾಬಿಟ್ಟಿ ಓಡಾಡುತ್ತಿದ್ದರೆ ನಿಮಗೂ ಅಪರಿಚಿತ ನಂಬರ್​ನಿಂದ ಕರೆ ಬರುತ್ತದೆ. ಅದು ಬೆಳದಿಂಗಳ ಬಾಲೆ ಆಗಿರುವುದಿಲ್ಲ. ಕರೊನಾ ಸೋಂಕಿಗೆ ಸಂಬಂಧಿಸಿದ ಕರೆ ಆಗಿರುತ್ತದೆ ಎಂದು ಸೂಕ್ಷ್ಮವಾಗಿ ಸಿಟಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ !