ನ್ಯೂಸ್

ಹೆತ್ತ ತಾಯಿ ಕೊಂದು ಸೂಟ್​ಕೇಸ್​ನಲ್ಲಿ ಶವಹೊತ್ತು ಪೊಲೀಸ್​ ಠಾಣೆಗೆ ಬಂದ ಮಗಳು!

ಬೆಂಗಳೂರು: ಹೆತ್ತ ತಾಯಿಯನ್ನು ಕೊಂದ ಮಗಳು, ಶವವನ್ನು ಸೂಟ್​ಕೇಸ್​ನಲ್ಲಿಟ್ಟು ಪೊಲೀಸ್​ ಠಾಣೆಗೆ ಹೊತ್ತು ತಂದ ಆಘಾತಕಾರಿ ಘಟನೆ ನಗರದ ಮೈಕೊಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೀವಾ ಪಾಲ್ (70) ಮಗಳಿಂದಲೇ ಕೊಲೆಯಾದ ದುರ್ದೈವಿ. ಸೆನಾ ಸೇನ್ (39) ಹೆತ್ತ ತಾಯಿಯನ್ನೇ ಕೊಲೆ ಮಾಡಿದ ಪಾಪಿ ಮಗಳು. ಆರೋಪಿ ಸೆನಾಲಿ ಸೇನ್, ತಾಯಿ ಬೀವಾ ಪಾಲ್​ ಮತ್ತು ಸೆನಾಲಿ ಅತ್ತೆ ಒಂದೇ ಮನೆಯಲ್ಲಿ ವಾಸವಿದ್ದರು. ಇಬ್ಬರು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದರಂತೆ. ಬೀಗರ ಜಗಳಕ್ಕೆ ಬೇಸತ್ತ ಬೀವಾ ಪಾಲ್, ನಿದ್ರೆ ಮಾತ್ರೆ ನುಂಗಿ ಸಾಯುವುದಾಗಿ ಹೇಳಿದ್ದರಂತೆ.

ತಂದೆಯ ಫೋಟೋ

ನಿನ್ನೆ (ಜೂ. 12) ಮುಂಜಾನೆ ತಾಯಿಗೆ 20 ನಿದ್ರೆ ಮಾತ್ರೆಯನ್ನು ಸೆನಾಲಿ ನುಂಗಿಸಿದ್ದಾಳೆ. ಬಳಿಕ ತಾಯಿ ಹೊಟ್ಟೆ ನೋವು ಅಂದಾಗ ವೇಲ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಇದಾದ ಬಳಿಕ ಟ್ರ್ಯಾಲಿ ಸೂಟ್​ಕೇಸ್​ನಲ್ಲಿ ತಾಯಿಯ ಶವ ಮತ್ತು ತಂದೆಯ ಫೋಟೋ ಇಟ್ಟುಕೊಂಡು ಸ್ಟೇಷನ್​ಗೆ ಹೊತ್ತು ತಂದಿದ್ದಾಳೆ.

ದಂಗಾದ ಪೊಲೀಸರು

ಬಿಳೇಕಳ್ಳಿಯ ಎನ್​​ಎಸ್​ಆರ್​ ಗ್ರೀನ್ ಅಪಾರ್ಟ್​ಮೆಂಟ್​ನಿಂದ ತಾಯಿಯ ಮೃತದೇಹವನ್ನು ಹೊತ್ತು ಮೈಕೊಲೇಔಟ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ. ಸೆನಾಲಿ ಸೇನ್ ಕೃತ್ಯ ಕಂಡು ಪೊಲೀಸರೇ ಒಂದು ಕ್ಷಣ ದಂಗಾದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೆನಾಲಿ ಸೇನ್​ಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)