ಸಾಂದರ್ಭಿಕ ಚಿತ್ರ 
ನ್ಯೂಸ್

ಗೋವಾ ಕ್ಯಾಸಿನೋದಲ್ಲಿ 25 ಲಕ್ಷ ರೂ. ಗೆದ್ದ ಚಹಾ ವ್ಯಾಪಾರಿ; ಬೆಂಗಳೂರಿಗೆ ಬರುತ್ತಿದ್ದಂತೆ 15 ಲಕ್ಷ ರೂ. ದೋಚಿದ ಸ್ನೇಹಿತರು

ಬೆಂಗಳೂರು: ಗೋವಾದ ಕ್ಯಾಸಿನೊದಲ್ಲಿ 25 ಲಕ್ಷ ರೂ. ಗೆದ್ದುಕೊಂಡು ನಗರಕ್ಕೆ ಬಂದಿದ್ದ ಚಹಾ ವ್ಯಾಪಾರಿ ತಿಲಕ್ ಮಣಿಕಂಠ (32) ಅವರನ್ನು ಸ್ನೇಹಿತರೆ ಅಪಹರಿಸಿ 15 ಲಕ್ಷ ದೋಚಿದ್ದಾರೆ. ಈ ಸಂಬಂಧ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?: ಬೆಂಗಳೂರಿನ ತ್ಯಾಗರಾಜನಗರ ನಿವಾಸಿ ತಿಲಕ್ ಎಂ ಮಣಿಕಂಠ ಜುಲೈ 30 ರಂದು ಮಣಿಕಂಠ ತನ್ನ ಸ್ನೇಹಿತರೊಂದಿಗೆ ಗೋವಾಕ್ಕೆ ಹೋಗಿದ್ದು, ಈ ವೇಳೆ ಅವರು 4 ಲಕ್ಷ ರೂ. ಹಣವನ್ನು ತೆಗೆದುಕೊಂಡು ಹೋಗಿದ್ದರು. ಆಗಸ್ಟ್ 1 ರಂದು ಪಣಜಿಯ ಮೆಜೆಸ್ಟಿಕ್ ಪ್ರೈಡ್ ಕ್ಯಾಸಿನೋದಲ್ಲಿ ಮಣಿಕಂಠ 25 ಲಕ್ಷ ರೂ. ಹಣ ಗೆದ್ದಿದ್ದರೂ, ಈ ಬಗ್ಗೆ ತನ್ನ ಸ್ನೇಹಿತರಿಗೆ ಸುದ್ದಿ ಬಹಿರಂಗಪಡಿಸಲಿಲ್ಲ. ಹಣವನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಈ ಹಣದ ಕುರಿತಾಗಿ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದರು.

ಆಗಸ್ಟ್ 5 ರಂದು ಬೆಂಗಳೂರಿಗೆ ಹಿಂದಿರುಗಿದ ಒಂದು ದಿನದ ನಂತರ, ಅವರು ಅಂಗಡಿಯೊಂದರ ಬಳಿ ನಿಂತು ಧೂಮಪಾನ ಮಾಡುತ್ತಿದ್ದಾಗ, ಅವರ ಸ್ನೇಹಿತರಾದ ಕಾರ್ತಿಕ್, ಪಾಂಡು, ಈಶ್ವರ್, ನಿಶ್ಚಲ್ ಮತ್ತು ಇತರರು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಸ್ಥಳಕ್ಕೆ ಕರೆದೊಯ್ದು ಮೊಬೈಲ್ ಬ್ಯಾಂಕಿಂಗ್ ಮೂಲಕ ಅವರ ಬ್ಯಾಂಕ್ ಖಾತೆಯಿಂದ 15 ಲಕ್ಷ ರೂ.ಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.

ಬೆಳಗ್ಗೆ 11 ರಿಂದ ಆಗಸ್ಟ್ 6 ರ ಬೆಳಿಗ್ಗೆ 8 ರ ನಡುವೆ ಆರೋಪಿಗಳು ಮಣಿಕಂಠನನ್ನು ಹಲವಾರು ಪ್ರತ್ಯೇಕ ಸ್ಥಳಗಳಿಗೆ ಬಲವಂತವಾಗಿ ಸಾಗಿಸಿದರು ಮತ್ತು ಪೊಲೀಸರಿಗೆ ತಿಳಿಸದಂತೆ ಎಚ್ಚರಿಕೆ ನೀಡಿದರು. ಅಂತಿಮವಾಗಿ ನೆಲಮಂಗಲದ ರೆಸಾರ್ಟ್ ಕೋಣೆಯನ್ನು ಆತನನ್ನು ಕೂಡಿ ಹಾಕಿದರು. ನಂತರ ಈತನಿಗೆ ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದಾರೆ. ಈ ಸಂಬಂಧ ಆಗಸ್ಟ್ 6 ರಂದು ಮಣಿಕಂಠ ಬೆಂಗಳೂರಿನ ಹನುಮಂತನಗರ ಪೊಲೀಸರಲ್ಲಿ ದೂರು ನೀಡಿದ್ದಾರೆ. ಪೊಲೀಸರು ಈ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.