ಬೆಂಗಳೂರು: ವಿಡಿಯೋ ಕಾಲ್ ಮಾಡು ನಿನ್ನ ಹೆಂಡತಿಯನ್ನು ನೋಡುತ್ತೇನೆ ಎಂದು ಒತ್ತಾಯಿಸಿದ್ದನ್ನು ನಿರಾಕರಿಸಿದ ವ್ಯಕ್ತಿಗೆ ದುಷ್ಕರ್ಮಿಯೊಬ್ಬ ಚಾಕು ಇರಿದಿರುವ ವಿಚಿತ್ರ ಘಟನೆ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜೇಶ್ ಮಿಶ್ರಾ ಎಂಬಾತನಿಗೆ ಸುರೇಶ್ ಎಂಬಾತ ಚಾಕು ಇರಿದಿದ್ದಾನೆ. ಇಬ್ಬರು ಎಚ್ಎಸ್ಆರ್ ಲೇಔಟ್ನ ಲೆನಿನ್ ಕಲೆಕ್ಷನ್ ಉದ್ಯೋಗಿಗಳು. ಸೇಲ್ಸ್ಮ್ಯಾನ್ ಅಗಿ ಕೆಲಸ ಮಾಡುತ್ತಿದ್ದ ರಾಜೇಶ್ ಮಿಶ್ರಾ ಜ.27ರಂದು ಸಂಜೆ 5.30ರ ಸಮಯದಲ್ಲಿ ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಪತ್ನಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಈ ವೇಳೆ ಆರೋಪಿ ಸುರೇಶ್, ರಾಜೇಶ್ರನ್ನು ನೋಡಿದ್ದಾರೆ.
ರಾಜೇಶ್ ಬಳಿ ಬಂದ ಸುರೇಶ್, ನಿನ್ನ ಪತ್ನಿಗೆ ವಿಡಿಯೋ ಕಾಲ್ ಮಾಡು ನಾನು ನೋಡುತ್ತೇನೆ ಎಂದು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ರಾಜೇಶ್, ಆತನಿಗೆ ಬೈಯ್ಯುತ್ತಾರೆ. ಇದರಿಂದ ಸ್ಥಳದಲ್ಲೇ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ವಾಗ್ವಾದ ತಾರಕಕ್ಕೇರಿ ತಾಳ್ಮೆ ಕಳೆದುಕೊಳ್ಳುವ ಸುರೇಶ್, ಅಲ್ಲಿಯೇ ಇದ್ದ ಕತ್ತರಿಯಿಂದ ರಾಜೇಶ್ ಹೊಟ್ಟೆಗೆ ಚುಚ್ಚಿದ್ದಾರೆ.
ಬಳಿಕ ಸ್ನೇಹಿತನ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡ ನಂತರ ಆರೋಪಿ ಸುರೇಶ್ ವಿರುದ್ಧ ರಾಜೇಶ್ ದೂರು ದಾಖಲಿಸಿದ್ದು, ಇದೀಗ ಆರೋಪಿ ಸುರೇಶ್ನನ್ನು ಎಚ್ಎಸ್ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್)