ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿಶೀಟರ್ಸ್ಗೆ ಬೆಂಗಳೂರು ಪೊಲೀಸರು ಇಂದು (ಏಪ್ರಿಲ್ 24) ಶಾಕ್ ನೀಡಿದ್ದಾರೆ. ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯ ವಿವಿಧ ಕಡೆ 100ಕ್ಕೂ ಹೆಚ್ಚು ರೌಡಿಶೀಟರ್ ಮನೆಗಳ ಮೇಲೆ ದಾಳಿ ನಡೆದಿದೆ.
ಕೆ.ಜಿ. ಹಳ್ಳಿ ಉಪವಿಭಾಗದ ಎಸಿಪಿ ಅವರ ನೇತೃತ್ವದಲ್ಲಿ ಬೆಳಿಗ್ಗೆ 5 ಗಂಟೆಗೆ ದಾಳಿ ನಡೆದಿದ್ದು, ರೌಡಿಗಳ ಮನೆಯಲ್ಲಿ ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ದಾಳಿ ವೇಳೆ ಕೆಲ ಮಾರಕಾಸ್ತ್ರ ಹಾಗೂ ಮಾದಕವಸ್ತುಗಳು ಪತ್ತೆಯಾಗಿವೆ. ಎನ್.ಬಿ.ಡಬ್ಲೂ ಉಲ್ಲಂಘಿಸಿ ನ್ಯಾಯಾಲಯಕ್ಕೆ ಹಾಜರಾಗದ ರೌಡಿಗಳ ಮನೆಗಳ ಮೇಲೆ ದಾಳಿ ನಡೆದಿದೆ.
ದಾಳಿಯ ವೇಳೆ ಪ್ರಮುಖ ಹತ್ತು ರೌಡಿಗಳ ಪಟ್ಟಿ ಮಾಡಲಾಗಿದೆ. ಜೊಲ್ಲು ಇಮ್ರಾನ್, ಅನಿಸ್, ಜಾಹಿರ್ ಅಬ್ಬಾಸ್, ಹುಸೇನ್ ಷರೀಫ್, ಗ್ರಾನೈಟ್ ಸಾದಿಕ್, ಸಾಕಿರ್, ಭಿಂಡಿ ಇರ್ಫಾನ್, ಯೂಸೆಫ್, ತೌಫಿಕ್ ಹಾಗೂ ನೆಲ್ಸನ್ ಹೆಸರು ಪಟ್ಟಿಯಲ್ಲಿದೆ. ಆಸಿಫ್ ಮನೆಯಲ್ಲಿ 105 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ರೌಡಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್)