ಬೆಂಗಳೂರು: ನಗರದ ಮಂದಾವರ ಬಳಿಯಿರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ದಲ್ಲಿ ನಡೆಯಲಿರುವ 3 ದಿನಗಳ ‘ಭಾರತ ಇಂಧನ ಸಪ್ತಾಹ’ಕ್ಕೆ ಪ್ರಧಾನಿ ಮೋದಿ ಅವರು ಇಂದು (ಫೆ.6) ಚಾಲನೆ ನೀಡಿದರು.
ಇಂದು ಬೆಳಗ್ಗೆ 10.50ಕ್ಕೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ, ಹೆಲಿಕಾಪ್ಟರ್ ಮೂಲಕ ಬಿಐಇಸಿಗೆ ತೆರಳಿ ಕಾರ್ಯಕ್ರಮ ಉದ್ಧಾಟಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಐದು ಗಣ್ಯರಿಗೆ ಮಾತ್ರ ಉಪಸ್ಥಿತರಿದ್ದರು. ಪ್ರಧಾನಿ ಮೋದಿ, ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಕೇಂದ್ರ ವಿದ್ಯುತ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ .ಸಿಂಗ್ ಉಪಸ್ಥಿತರಿದ್ದರು.
ಜಾಗತಿಕ ಇಂಧನ ಪರಿವರ್ತನೆಯಲ್ಲಿ ಭಾರತದ ಪಾತ್ರಕ್ಕಾಗಿ ಪ್ರಧಾನ ಮಂತ್ರಿಯವರ ದೀರ್ಘಾವಧಿಯ ದೃಷ್ಟಿಕೋನದಿಂದ ಈ ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮವು ಹುಟ್ಟಿಕೊಂಡಿದೆ ಎಂದು ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.
ವಾತಾವರಣದಲ್ಲಿ ಇಂಗಾಲಾಮ್ಲ (ಸಿಒ2) ಪ್ರಮಾಣ ತಗ್ಗಿಸದಿದ್ದರೆ ಉಳಿಗಾಲವಿಲ್ಲವೆಂದು ಜಗತ್ತು ಅರಿತಿದ್ದು, ಈ ನಿಟ್ಟಿನಲ್ಲಿ ಹಸಿರು ಇಂಧನ ಉಪಕ್ರಮಗಳಿಗೆ ಭಾರತವೇ ಮೇಲ್ಪಂಕ್ತಿ ಹಾಕಿಕೊಟ್ಟಿದೆ. 30ಕ್ಕೂ ಹೆಚ್ಚು ಸಚಿವರು, 30 ಸಾವಿರಕ್ಕೂ ಅಧಿಕ ಇಂಧನ ವಲಯದ ಪ್ರತಿನಿಧಿಗಳು, 500ಕ್ಕೂ ಹೆಚ್ಚು ಭಾಷಣಕಾರರು ಭವಿಷ್ಯದ ಸವಾಲುಗಳನ್ನು ಮೂರು ದಿನಗಳ ಸಪ್ತಾಹದಲ್ಲಿ ರ್ಚಚಿಸಲಿದ್ದಾರೆ.