ನ್ಯೂಸ್

ದಶಪಥ ಹೆದ್ದಾರಿ ಟೋಲ್ ದರ ಹೆಚ್ಚಳ ಇಲ್ಲ; ವಿರೋಧದ ಬಳಿಕ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ

ಬೆಂಗಳೂರು: ಬೆಂಗೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆಯಾದ ದಿನದಿಂದಲೂ ಸಾಕಷ್ಟು ವಿವಾದಗಳಿಂದಲೇ ಸದ್ದು ಮಾಡುತ್ತಿದೆ. ಈ ನಡುವೆ ಟೋಲ್ ಹೆಚ್ಚು ಮಾಡುವ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನ ಸವಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ತೀವ್ರ ವಿರೋಧದ ಬಳಿಕ ಹೆದ್ದಾರಿ ಪ್ರಾಧಿಕಾರ ದರ ಹೆಚ್ಚಳ ಕೈಬಿಟ್ಟಿದೆ.

ಎನ್​ಹೆಚ್​ಎಐ ಶೇ.22ರಷ್ಟು ಟೋಲ್ ದರ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಸಾರ್ವಜನಿಕರ ಒತ್ತಡಕ್ಕೆ ಮಣಿದು ಹಳೆಯ ದರವನ್ನೇ ಮುಂದುವರೆಸಲು ಎನ್​ಹೆಚ್​ಎಐ ನಿರ್ಧಾರ ಮಾಡಿದೆ. 

ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲೇ ಟೋಲ್​ ದರ ಏರಿಕೆ

ಎಕ್ಸ್​ಪ್ರೆಸ್​​ವೇನಲ್ಲಿ ಟೋಲ್ ದರವನ್ನು ಏಕಾಏಕಿ ಏರಿಕೆ ಮಾಡಿ, ಪರಿಷ್ಕೃತ ದರ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಹಿಂದಿನ ಆದೇಶದಲ್ಲಿ ಸೂಚನೆ ನೀಡಲಾಗಿತ್ತು. ಹೆದ್ದಾರಿಯಲ್ಲಿ ಕಳೆದ ಮಾರ್ಚ್ 14ರಂದು ಶುಲ್ಕ ವಸೂಲಿಗೆ ಚಾಲನೆ ನೀಡಲಾಗಿತ್ತು.

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೈವೇಯಲ್ಲಿ ಟೋಲ್ ಸಂಗ್ರಹ ಪ್ರಾರಂಭ ಆದಾಗಿನಿಂದ ದುಬಾರಿ ಶುಲ್ಕ ಎಂದು ಎಕ್ಸ್​ಪ್ರೆಸ್ ವೇ ಟೋಲ್ ಬಳಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು.

ಟೋಲ್ ದರ ಏರಿಕೆ ಆದೇಶ ಹಿಂಪಡೆದ ಹಿನ್ನೆಯಲ್ಲಿ ಟೋಲ್ ಸಿಬ್ಬಂದಿ ಹಳೆ ದರ ಮುಂದುವರಿಸಿದ್ದಾರೆ. ಕಾರುಗಳಿಗೆ ಸದ್ಯ ಹಳೆಯ ದರ 135 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇನ್ನೂ ಆದೇಶ ಬಂದಿಲ್ಲ ಎಂದು ಸಿಬ್ಬಂದಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದರು. ಈ ಬಗ್ಗೆ ಸುದ್ದಿ ಪ್ರಕಟವಾದ ಬೆನ್ನಲ್ಲೇ ಟೋಲ್ ಸಿಬ್ಬಂದಿ ಹೆಚ್ಚುವರಿ ವಸೂಲಿ ಕೈಬಿಟ್ಟಿದ್ದಾರೆ. ಇದನ್ನೂ ಓದಿ: ಚುನಾವಣಾ ಕರ್ತವ್ಯಕ್ಕೆ ಗೈರು ಹಾಜರಾದ ಶಿಕ್ಷಕ; ಅಮಾನತ್ತು ಆದೇಶ