ನ್ಯೂಸ್

ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿಯಾಗ್ತಿದ್ದ ಖದೀಮನಿಗೆ ಸಾರ್ವಜನಿಕರಿಂದ ಬಿತ್ತು ಧರ್ಮದೇಟು!

ಬೆಂಗಳೂರು: ಮಹಿಳೆಯ ಮಾಂಗಲ್ಯ ಸರ ಕಳ್ಳತನದ ವೇಳೆ ಖದೀಮನೊಬ್ಬ ಸಿಕ್ಕಿಬಿದ್ದಿರುವ ಘಟನೆ ದೊಡ್ಡಬಳ್ಳಾಪುರದ ರೈಲ್ವೆ ಸ್ಟೇಷನ್ ರಸ್ತೆಯ ಸ್ಕೌಟ್ ಕ್ಯಾಂಪ್ ರಸ್ತೆಯ ಬಳಿ ನಡೆದಿದೆ.

ಮಹಿಳೆಯ ಕೊರಳಿನಿಂದ ಕಿತ್ತುಕೊಂಡು ಪರಾರಿಯಾಗುವ ವೇಳೆ ಸಾರ್ವಜನಿಕರ ಕೈಗೆ ಖದೀಮ ಸಿಕ್ಕಿಬಿದ್ದಿದ್ದಾನೆ. ನಿನ್ನೆ (ಡಿ.21) ಸಂಜೆ ಕೆಲಸ ಮುಗಿಸಿ ಮಹಿಳೆ ಹಿಂದಿರುಗುತ್ತಿದ್ದಳು. ಒಂಟಿಯಾಗಿ ಬರುತ್ತಿದ್ದದ್ದನ್ನು ಗಮನಿಸಿ ಖದೀಮ ಕೃತ್ಯಕ್ಕೆ ಯತ್ನಿಸಿದ್ದಾನೆ.

ಮಾಂಗಲ್ಯ ಸರ ಕಿತ್ತುಕೊಳ್ಳುತ್ತಿದ್ದಂತೆ ಮಹಿಳೆ ಕೂಗಿಕೊಂಡಾಗ, ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ಕಳ್ಳನನ್ನು ಹಿಡಿದಿದ್ದಾರೆ. ಬಳಿಕ ಆತನಿಗೆ ಧರ್ಮದೇಟು ನೀಡಿ ಪೋಲೀಸರಿಗೆ ಒಪ್ಪಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)