ನ್ಯೂಸ್

ರಾಯಲ್​ ಎನ್​ಫೀಲ್ಡ್​ಗೆ ಕೆಟಿಎಂ ಬೈಕ್​ಗೆ ಡಿಕ್ಕಿ: ಯುವತಿ ದುರಂತ ಸಾವು, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಘಟನೆ

ಬೆಂಗಳೂರು: ಕೆಟಿಎಂ ಬೈಕ್​ ಡಿಕ್ಕಿಯಾಗಿ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಪ್ಲೈಓವರ್ ರಸ್ತೆಯಲ್ಲಿ ನಿನ್ನೆ (ಫೆ.2) ರಾತ್ರಿ ನಡೆದಿದೆ.

ಶುಭಶ್ರೀ (28) ಅಪಘಾತದಲ್ಲಿ ಮೃತಪಟ್ಟ ಯುವತಿ. ಈಕೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೊಲ್ಲಹಳ್ಳಿಯ ಅವನಿ ಅಲೈನ್ ಅಪಾರ್ಟ್​ಮೆಂಟ್​ನ ನಿವಾಸಿ. ಸ್ನೈಡರ್ ಕಂಪನಿಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದರು. ರಾಯಲ್ ಎನ್​ಫೀಲ್ಡ್ ಬೈಕ್​​ನಲ್ಲಿ ಹಿಂಬದಿ ಕುಳಿತು ಸಂಚರಿಸುತ್ತಿದ್ದರು. ಈ ವೇಳೆ ಹಿಂಬದಿಯಿಂದ ಅತಿವೇಗವಾಗಿ ಬಂದ ಕೆಟಿಎಂ ಬೈಕ್ ಸವಾರ, ರಾಯಲ್ ಎನ್​ಫೀಲ್ಡ್ ಬೈಕ್​ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಯ ಮೇಲೆ ಬಿದ್ದು ಹಿಂಬದಿ ಕುಳಿತಿದ್ದ ಶುಭಶ್ರೀ ತಲೆಗೆ ಗಂಭೀರ ಗಾಯಗಳಾಗಿತ್ತು. ಚಿಕಿತ್ಸೆಗಾಗಿ ಹತ್ತಿರದ ಕಾವೇರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಶುಭಶ್ರೀ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.

ಅಪಘಾತ ನಡೆಸಿದ ಕೆಟಿಎಂ ಬೈಕ್ ಸವಾರ ವಿಮಲ್ ಚಂದ್ರ ಮೋಹನ್ (30) ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಅತಿವೇಗ ಹಾಗೂ ಅಜಾಗರೂಕತೆ ಚಾಲನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)