ನ್ಯೂಸ್

ಕಾಂಗ್ರೆಸ್ ಮುಖಂಡ ಅಲ್ತಾಫ್​ ಖಾನ್ ಹತ್ಯೆಗೆ ಮನೆ ಮುಂದೆ ಹೊಂಚು ಹಾಕಿದ್ದ ಮೂವರು ಪೊಲೀಸರ ವಶ!

ಬೆಂಗಳೂರು: ಕಾಂಗ್ರೆಸ್​ ಮುಖಂಡ ಅಲ್ತಾಫ್​ ಖಾನ್​ ಮೇಲೆ ದಾಳಿ ಮಾಡಲು ಮಾರಕಾಸ್ತ್ರಗಳೊಂದಿಗೆ ಅಲ್ತಾಫ್​ ಮನೆ ಬಳಿ ಬಂದಿದ್ದ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೂವರು ಯುವಕರನ್ನು ಹಿಡಿದು ಸ್ಥಳೀಯರು ಜೆ.ಜೆ.ನಗರ ಪೊಲೀಸರ ವಶಕ್ಕೆ ನೀಡಿದ್ದಾರೆ. ನಿನ್ನೆ (ಡಿ.24) ರಾತ್ರಿ ಹತ್ತು ಗಂಟೆ ಸುಮಾರಿಗೆ ಆರೋಪಿಗಳು ಜೆಜೆ ನಗರ ಠಾಣಾ ವ್ಯಾಪ್ತಿಯಲ್ಲಿರುವ ಅಲ್ತಾಫ್​ ಖಾನ್ ಮನೆ ಬಳಿ ಮಾರಾಕಾಸ್ತ್ರಗಳನ್ನು ಹಿಡಿದು ಬಂದಿದ್ದರು. ಆಟೋರಿಕ್ಷಾದಲ್ಲಿ ಬಂದು ಹೊಂಚು ಹಾಕಿ ಕುಳಿತ್ತಿದ್ದರು.

ಅಲ್ತಾಫ್​ ಮನೆಯಿಂದ ಆಚೆ ಬರದಿದ್ದಾಗ, ಮನೆಯಿಂದ ಹೊರ ಬರದೇ ಅಲ್ತಾಫ್​ ಬಚಾವ್ ಆದ ಅಂತಾ ಆರೋಪಿಗಳು ಮಾತನಾಡಿಕೊಳ್ಳುವುದನ್ನು ಸ್ಥಳೀಯರು ಕೇಳಿಸಿಕೊಂಡು, ಆಟೋದಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಬೆನ್ನತ್ತಿ ಹಿಡಿದು ಜೆ.ಜೆ. ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಾಲ್ವರು ಆರೋಪಿಗಳು ಚಾಕು, ಬ್ಲೇಡ್​ಗಳನ್ನು ಹಿಡಿದು ಬಂದಿದ್ದರು. ಜನ ಬೆನ್ನತ್ತಿದ್ದನ್ನು ನೋಡಿ ಬಂದಿದ್ದವರಲ್ಲಿ ಒಬ್ಬ ಆರೋಪಿ ಪರಾರಿಯಾಗಿದ್ದಾನೆ. ಸದ್ಯ ಮೂವರನ್ನು ಜೆ.ಜೆ.ನಗರ ಪೊಲೀಸರಿಗೆ ಸ್ಥಳೀಯರು ಒಪ್ಪಿಸಿದ್ದಾರೆ. ಆರೋಪಿಗಳನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)