2ನೇ ಆವೃತ್ತಿಯ ರಗ್ಬಿ ಪ್ರೀಮಿಯರ್ ಲೀಗ್‌ಗೆ ಬೆಂಗಳೂರು ಬ್ರೇವ್‌ಹಾರ್ಟ್ಸ್ ತಂಡ ಸಿದ್ಧ
ಬೆಂಗಳೂರು: ಹೈದರಾಬಾದ್‌ನ ಗಚ್ಚಿಬೌಲಿ ಸ್ಟೇಡಿಯಂನಲ್ಲಿ ಜೂನ್ 16ರಿಂದ 28ರವರೆಗೆ ನಡೆಯುವ ಎಚ್‌ಎಸ್‌ಬಿಸಿ ರಗ್ಬಿ ಪ್ರೀಮಿಯಂ ಲೀಗ್‌ನ (Rugby Premier League) ಬೆಂಗಳೂರಿನ ರಗ್ಬಿ ʼಬೆಂಗಳೂರು ಬ್ರೇವ್‌ಹಾರ್ಟ್ಸ್ʼ (Bengaluru Bravehearts) ತಂಡವನ್ನು ಗುರುವಾರ ಅನಾವರಣಗೊಳಿಸಲಾಯಿತು.
ತಂಡದ ಸಹ ಮಾಲೀಕ ಮಣಿಪಾಲ್ ಎಜುಕೇಷನ್ ಮತ್ತು ಮೆಡಿಕಲ್ ಗ್ರೂಪ್‌ನ ಅಧ್ಯಕ್ಷ ರಂಜನ್ ಪೈ ಮತ್ತು ಸೋಹಮ್ ಇನ್‌ಫ್ರಾಸ್ಟ್ರಕ್ಚರ್ ಅಧ್ಯಕ್ಷ ಹಾಗೂ ಮಿರರ್ ಸಿಇಒ ಸಂಜಿತ್ ಶೆಟ್ಟಿ ಬೆಂಗಳೂರು ಬ್ರೇವ್‌ಹಾರ್ಟ್ಸ್ ತಂಡವನ್ನು ಪರಿಚಯಿಸಿದರು. ಹದಿಮೂರು ದಿನಗಳವರೆಗೆ ರಗ್ಬಿ ಸೆವೆನ್ಸ್ ಟೂರ್ನಿಯಲ್ಲಿ ಆರು ಫ್ರಾಂಚೈಸಿ ತಂಡಗಳು ಸ್ಪರ್ಧಿಸಲಿವೆ. ಭಾರತೀಯ ಫ್ರಾಂಚೈಸಿ ಬ್ಯಾನರ್‌ನಡಿ ಬೆಂಗಳೂರು ತಂಡ ನೆಚ್ಚಿನ ತಂಡಗಳಲ್ಲಿ ಒಂದೆನಿಸಿ ಕಣಕ್ಕೆ ಇಳಿಯುತ್ತಿದೆ.
ವರ್ಲ್ಡ್ ರಗ್ಬಿ ನಡೆಸಿದ ಸಮೀಕ್ಷೆಯಲ್ಲಿ ವಿಶ್ವಾದ್ಯಂತ ರಗ್ಬಿಗೆ ಸುಮಾರು 800 ದಶಲಕ್ಷ ಅಭಿಮಾನಿಗಳಿದ್ದು, ಭಾರತ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಒಂದಾಗಿದೆ. ಒಲಿಂಪಿಕ್ಸ್‌ನಲ್ಲಿ ರಗ್ಬಿ ಸೇರ್ಪಡೆಯಾದ ಬಳಿಕ ಭಾರತದಲ್ಲಿ ರಗ್ಬಿ ಅಭಿಮಾನಿಗಳ ಸಂಖ್ಯೆಯಲ್ಲಿ ಶೇ 50ರಷ್ಟು ಹೆಚ್ಚಳವಾಗಿದ್ದು ಅಂದಾಜು ಇಲ್ಲಿ 25.7 ಮಿಲಿಯ ರಗ್ಬಿ ಅಭಿಮಾನಿಗಳಿದ್ದಾರೆ. 2025ರಲ್ಲಿ ಫ್ರಾಂಚೈಸಿ ಆಧಾರಿತ ರಗ್ಬಿ ಸೆವೆನ್ಸ್ ಲೀಗ್ ಎಚ್‌ಎಸ್‌ಬಿಸಿ ಪ್ರೀಮಿಯರ್ ಲೀಗ್ ದೇಶದಲ್ಲಿ ರಗ್ಬಿ ಜನಪ್ರಿಯತೆಯನ್ನು ಹೆಚ್ಚಿಸಲು ಯಶಸ್ವಿಯಾಯಿತು. 2026ರಲ್ಲಿ ಲೀಗ್ ಇನ್ನಷ್ಟು ವಿಸ್ತರಿಸಿದ್ದು, ಮೊದಲ ಬಾರಿಗೆ ಪುರುಷರ ತಂಡದ ಜೊತೆಗೆ ಮಹಿಳಾ ತಂಡಗಳೂ ಕಣಕ್ಕೆ ಇಳಿಯುತ್ತಿವೆ. ದೇಶದಲ್ಲಿ ರಗ್ಬಿ ಕಾಲಿಡುತ್ತಿದೆ, ಅದರಲ್ಲಿ ಬೆಂಗಳೂರು ಮಂಚೂಣಿಯಲ್ಲಿದೆ.
ಬ್ರೇವ್‌ಹಾರ್ಟ್ಸ್ ಸೀಸನ್ 2 ತಂಡವನ್ನು ಸಮತೋಲನದಿಂದ ರೂಪಿಸಲಾಗಿದ್ದು ವಿಶ್ವಕಪ್ ಮತ್ತು ಒಲಿಂಪಿಕ್ ಆಟಗಾರರನ್ನೊಳಗೊಂಡಿದೆ. ಅತಿ ಹೆಚ್ಚು ಬಾರಿ ಪುರುಷರ ಸೆವೆನ್ಸ್ ಪ್ಲೇಯರ್ ಪ್ರಶಸ್ತಿ ಗೌರವ ಪಡೆದಿರುವ ಆಸ್ಟ್ರೇಲಿಯದ ಹೆನ್ರಿ ಹಚಿಸನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. 2018ರ ರಗ್ಬಿ ವರ್ಲ್ಡ್ ಕಪ್ ಸೆವೆನ್ಸ್ ವಿನ್ನರ್ ಮತ್ತು 2022 ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತರಾದ ಅಕುಇಲಾ ರೊಕೊಲಿಸೊವಾ ತಂಡದಲ್ಲಿ ಮುಂಚೂಣಿಯಲ್ಲಿದ್ದಾರೆ. 2022- 23ರ ವರ್ಲ್ಡ್ ರಗ್ಬಿ ಸೆನನ್ ಸೀರೀಸ್‌ನಲ್ಲಿ 415 ಪಾಯಿಂಟ್‌ಗಳನ್ನು ಸಂಗ್ರಹಿಸುವ ಮೂಲಕ ರೊಕೊಲಿಸೊವಾ ಎಲೈಟ್ 100 ಟ್ರೈ ಕ್ಲಬ್ ಪ್ರವೇಶಿಸಿದ್ದರು.
2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತ, ಸ್ಪ್ರಿಂಗ್‌ಬಾಕ್ ಸೆವೆನ್ಸ್ ವರ್ಷದ ಆಟಗಾರ ಶಿಲ್ಟನ್ ವ್ಯಾನ್ ವಿಕ್, ಮೂರು ಬಾರಿಯ ಒಲಿಂಪಿಯನ್ (ರಿಯೋ, ಟೋಕಿಯೋ ಮತ್ತು ಪ್ಯಾರಿಸ್) ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತ ಹಾಗೂ 150ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳ ಅನುಭವಿ ನರೊಹಿ ಮೆಕ್‌ಗಾರ್ವಿ ಬ್ಲಾಕ್, ಎಚ್‌ಎಸ್‌ಬಿಸಿ ಎಸ್‌ವಿಎನ್ ಸರ್ಕ್ಯೂಟ್‌ನಲ್ಲಿ ಸ್ಫೋಟಕ ವಿಂಗರ್‌ಗಳಲ್ಲಿ ಒಬ್ಬರಾಗಿರುವ ರ್ಯಾನ್ ಆಪ್ಸ್, ಮತ್ತು ಪ್ಯಾರಿಸ್ ಗೇಮ್ಸ್‌ನಲ್ಲಿ ಚೊಚ್ಚಲ ಟೂರ್ನಿಯಲ್ಲಿ ಸ್ಫೋಟಕ ಆಟದ ಮೂಲಕ ಗಮನ ಸೆಳೆದಿರುವ ಮೊಟು ಒಪೆಟಾಯ್ ಬೆಂಗಳೂರು ಬ್ರೇವ್‌ಹಾರ್ಟ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ತಂಡದ ಭಾರತೀಯ ಆಟಗಾರರ ಶಕ್ತಿಯನ್ನು ನಿರ್ಲಕ್ಷಿಸುವಂತಿಲ್ಲ. ಬ್ರೇವ್‌ಹಾರ್ಟ್ಸ್ ತಂಡದ ಎಲ್ಲ ಭಾರತೀಯ ಆಟಗಾರರೂ ರಗ್ಬಿ ಸೆವೆನ್ಸ್ ಆಗಲೀ ಫಿಫ್ಟೀನ್ ಆಗಲೀ ಅಂತರ್‌ರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದವರು. ತಂಡದಲ್ಲಿರುವ ಪಶ್ಚಿಮ ಬಂಗಾಳದ ರಾಜದೀಪ್ ಸಹ ಮತ್ತು ಆಕಾಶ್ ಬಾಲ್ಮೀಕಿ ವಿದೇಶಿ ನೆಲದಲ್ಲಿ ವೃತ್ತಿಪರ ಕ್ಲಬ್ ಪರ ಆಡಿದ ಅನುಭವಿಗಳು.
ಆಟಗಾರರಿಗೆ ಸ್ಫೂರ್ತಿಯಾಗಿ ನಿಂತಿರುವವರು ಕೋಚಿಂಗ್ ಸಿಬ್ಬಂದಿ. ಹೆಡ್ ಕೋಚ್ ಸ್ಪೇನ್‌ನ ಫ್ರಾನ್ಸಿಸ್ಕೊ (ಪಾಕೊ) ಹರ್ನಂಡೆಜ್ ಅವರು ಸ್ಪೇನ್‌ನಲ್ಲಿ ರಾಷ್ಟ್ರೀಯ ಸೆವೆನ್ಸ್ ಪ್ರೋಗ್ರಾಮ್ ಬೆಳೆಸಿದವರು. ತಂತ್ರಗಳಿಗೆ ಹೆಸರಾಗಿರುವ ಹರ್ನಂಡೆಜ್ ಅವರದು ಎಚ್‌ಎಸ್‌ಬಿಸಿ ರಗ್ಬಿ ಸೆವೆನ್ಸ್ ಸೀರೀಸ್‌ನಲ್ಲಿ ಮುಂಚೂಣಿಯ ಹೆಸರಾಗಿದೆ. ಸ್ಪೇನಿನವರೇ ಆಗಿರುವ ಟೆರೆನ್ಸ್ ಜೋಸೆಫ್ ಅವರಿಗೆ ಸಹಾಯಕರಾಗಿದ್ದಾರೆ. ಇನ್ನೊಬ್ಬ ಸ್ಪೇನ್ ಕೋಚ್ ಮ್ಯಾನುವೆಲ್ ಸಿಲೆರೋ, ಆಟಗಾರರ ಸದೃಢತೆ ಮತ್ತು ಕಂಡೀಷನಿಂಗ್ ಕೋಚ್ ಆಗಿದ್ದಾರೆ. ಈ ಮೂವರೂ ತಂಡದ ಹಿಂದಿನ ಪ್ರಬಲ ಶಕ್ತಿಯಾಗಿದ್ದಾರೆ.
ತಂಡವನ್ನು ಪರಿಚಯಿಸಿ ಮಾತನಾಡಿದ ಫ್ರಾಂಚೈಸಿಯ ಸಹ ಮಾಲೀಕ ಸಂಜಿತ್ ಶೆಟ್ಟಿ ಅವರು “ಬೆಂಗಳೂರು ಎಂದಿಗೂ ನೀವು ಎಲ್ಲಿಂದ ಬಂದವರೆಂದು ಕೇಳೋದಿಲ್ಲ. ನೀವು ಹೇಗೆ ನಡೆದುಕೊಳ್ಳುತ್ತೀರಿ ಎಂದು ಕೇಳುತ್ತದೆ. ಇಲ್ಲಿ ನಮ್ಮ ತಂಡ ನಿಮ್ಮ ಮುಂದಿದೆ. ಟೂರ್ನಿಯಲ್ಲಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ” ಎಂದು ಹೇಳಿದರು.
ರಗ್ಬಿ ಸೆವೆನ್ಸ್ ಜಾಗತಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ಕ್ರೀಡಾ ಮಾದರಿಯಾಗಿದ್ದು, ಚುಟುಕು ಮಾದರಿಯಲ್ಲಿ ಆಕ್ಷನ್‌ಗೆ ಹೆಚ್ಚು ಒತ್ತು ನೀಡುತ್ತದೆ. ಭಾರತ, ಚೀನಾ ಮತ್ತು ಅಮೆರಿಕದಂಥ ದೇಶಗಳಲ್ಲಿ ಈ ಮಾದರಿಯಿಂದಾಗಿಯೇ ರಗ್ಬಿ ಜನಪ್ರಿಯವಾಗುತ್ತಿದೆ. ಇದರಲ್ಲಿ ಬ್ರೇವ್‌ಹಾರ್ಟ್ಸ್ ತನ್ನ ಕೊಡುಗೆ ನೀಡುತ್ತಿದೆ. ಐದು ಖಂಡಗಳಿಂದ ಆಯ್ದ 14 ಆಟಗಾರರು ಒಂದು ನಗರವನ್ನು ಪ್ರತಿನಿಧಿಸುತ್ತಿದ್ದಾರೆ.
ಬೆಂಗಳೂರು ಬ್ರೇವ್‌ಹಾರ್ಟ್ಸ್ ತಂಡದ ಕುರಿತು:ಬೆಂಗಳೂರು ಬ್ರೇವ್‌ಹಾರ್ಟ್ಸ್ ತಂಡವು, ಎಚ್‌ಎಸ್‌ಬಿಸಿ ರಗ್ಬಿ ಪ್ರೀಮಿಯರ್ ಲೀಗ್ ಪವರ್ಡ್ ಬೈ ಅವಿಡ್ ರಗ್ಬಿ ಸೆವೆನ್ಸ್ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಆರು ಫ್ರಾಂಚೈಸಿಗಳಲ್ಲಿ ಒಂದಾಗಿದೆ. 2025ರಲ್ಲಿ ಬೆಂಗಳೂರು ಮೂಲದ ತಂಡವಾಗಿ ಆರಂಭವಾದ ಬ್ರೇವ್‌ಹಾರ್ಟ್ಸ್ ಫ್ರಾಂಚೈಸಿಯ ಮಾಲೀಕತ್ವವನ್ನು ರಂಜನ್ ಪೈ (ಮಣಿಪಾಲ್ ಎಜುಕೇಷನ್ ಆಂಡ್ ಮೆಡಿಕಲ್ ಗ್ರೂಪ್), ಭೂಪಿಂದರ್ ಸಿಂಗ್ (ಇನ್‌ಕ್ರೆಡ್ ಸ್ಥಾಪಕರು) ಮತ್ತು ಸಂಜಿತ್ ಶೆಟ್ಟಿ (ಸೋಹಂ ಇನ್‌ಫ್ರಾಸ್ಟ್ರಕ್ಚರ್ ಅಧ್ಯಕ್ಷರು ಮತ್ತು ಮಿರರ್ ಸ್ಥಾಪಕರು ಹಾಗೂ ಸಿಇಒ) ಸಂಯುಕ್ತವಾಗಿ ಹೊಂದಿದ್ದಾರೆ. 2025ರ ಚೊಚ್ಚಲು ಲೀಗ್‌ನಲ್ಲಿ ಬೆಂಗಳೂರು ಬ್ರೇವ್‌ಹಾರ್ಟ್ಸ್ 12 ಪಂದ್ಯಗಳನ್ನಾಡಿದ್ದು 5ರಲ್ಲಿ ಗೆದ್ದಿತ್ತು. 1 ಡ್ರಾಗೊಂಡರೆ 6ರಲ್ಲಿ ಸೋಲು ಕಂಡು ನಾಲ್ಕನೇ ಸ್ಥಾನ ಪಡೆದಿತ್ತು. ಫ್ರಾನ್ಸಿಸ್ಕೊ (ಪಾಕೊ) ಹರ್ನಂಟೆಜ್ (ಹೆಡ್ ಕೋಚ್), ಟೆರೆನ್ಸ್ ಜೋಸೆಫ್ (ಅಸಿಸ್ಟಂಟ್ ಕೋಚ್) ಮತ್ತು ಮ್ಯಾನುವೆಲ್ ಸಿಲೆರೊ (ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ಕೋಚ್) ತಂಡದ ತರಬೇತುದಾರರಾಗಿದ್ದಾರೆ.
ಮಣಿಪಾಲ್ ಹಾಸ್ಪಿಟಲ್ಸ್, ಇನ್‌ಕ್ರೆಡ್ ಮತ್ತು ಸೋಹಂ ಎನರ್ಜಿ, ಸೀಸನ್ ಒಂದರ ಕಿಟ್ ಪ್ರಾಯೋಜಕರಾಗಿದ್ದರು. ಎರಡನೇ ಆವೃತ್ತಿಯ ಬ್ರೇವ್‌ಹಾರ್ಟ್ಸ್ ತಂಡದಲ್ಲಿ ಐದು ಖಂಡಗಳ ಒಲಿಂಪಿಯನ್, ವಿಶ್ವ ಸರಣಿಯ ದಾಖಲೆವೀರರು ಮತ್ತು ಭಾರತದ ಅತ್ಯಂತ ಪ್ರತಿಭಾವಂತ ಆಟಗಾರರಿದ್ದಾರೆ.