ನ್ಯೂಸ್

ನಕಲಿ ದಾಖಲೆ ಸೃಷ್ಟಿಸಿ ಶಾಸಕ ಗೂಳಿಹಟ್ಟಿ​ಗೆ ಸೇರಿದ BDA ಸೈಟ್​ ಕಬಳಿಕೆ: ಎಫ್​ಐಆರ್​ ದಾಖಲು

ಬೆಂಗಳೂರು: ನಕಲಿ ದಾಖಲೆಯನ್ನು ಸೃಷ್ಟಿ ಮಾಡಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ಗೆ ಸೇರಿದ ಬೆಲೆ ಬಾಳುವ ಬಿಡಿಎ ನಿವೇಶನವನ್ನು ಭೂಗಳ್ಳರು ಲಪಾಟಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಂಜಯ್​ ನಗರ ಪೊಲೀಸ್​ ಠಾಣೆಯಲ್ಲಿ 8 ಮಂದಿಯ ವಿರುದ್ಧ ಗೂಳಿಹಟ್ಟಿ ದೂರು ದಾಖಲಿಸಿದ್ದಾರೆ.

ಸರ್ಕಾರ ಕೋಟಾದಡಿಯಲ್ಲಿ 2008ನೇ ಸಾಲಿನಲ್ಲಿ ಗೂಳಿಹಟ್ಟಿ ಶೇಖರ್​ ಹೆಸರಿಗೆ 50x80 ಅಳತೆಯ ಬಿಡಿಎ ನಿವೇಶನವನ್ನು ಹಂಚಿಕೆ ಮಾಡಲಾಗಿದೆ. ನಿವೇಶನ ಹಂಚಿಕೆಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಬಿಡಿಎ ನೀಡಿದ್ದು, ಅಂದಿನಿಂದ ಇಲ್ಲಿಯವರೆಗೂ ನಿವೇಶನ ನನ್ನ ಸ್ವಾಧೀನದಲ್ಲೇ ಇದೆ. ಅಲ್ಲದೆ, ನಿವೇಶನದ ಮೇಲೆ ಜನತಾ ಕೋ ಆಪರೇಟಿವ್​ ಬ್ಯಾಂಕ್​ನಲ್ಲಿ ಸಾಲ ಸಹ ತೆಗೆದುಕೊಂಡಿದ್ದೇನೆ ಎಂದು ಗೂಳಿಹಟ್ಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆದರೆ, ರಾಮಮೂರ್ತಿ ಅಲಿಯಾಸ್ ಮುನಿವಣ್ಣನ್, ಅನುರಾಧಾ, ದೀಪೀಕಾ, ನಿವೇತಿಕಾ, ಜಿಮ್ಮಿ ರಾಹುರ್, ಮಂಜೇಗೌಡ ಮತ್ತು ಆನಂದ ಮೂರ್ತಿ ಸೇರಿದಂತೆ ಒಟ್ಟು ಎಂಟು ಜನರ ನಕಲಿ ದಾಖಲೆಯನ್ನು ಸೃಷ್ಟಿ ಮಾಡಿ ನಿವೇಶವನ್ನು ಕಬಳಿಸಿದ್ದಾರೆ. ಅಲ್ಲದೆ, ನಿವೇಶನದಲ್ಲಿ ಅಕ್ರಮವಾಗಿ ಕಾಂಪೌಂಡ್​ ಸಹ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ನಕಲೆ ದಾಖಲೆ ಸೃಷ್ಟಿ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಗೂಳಿಹಟ್ಟಿಯವರು ದೂರಿನಲ್ಲಿ ಮನವಿ ಮಾಡಿದ್ದಾರೆ.

ಅಕ್ರಮ ದಾಖಲೆಗಳನ್ನು ಸೃಷ್ಟಿ ಮಾಡಿಕೊಟ್ಟಿರುವ ಬ್ಯಾಟರಾನಯಪುರದ ಉಪನೋಂದಣಾಧಿಕಾರಿಗಳ ವಿರುದ್ಧವು ಹಾಗೂ ಸಾಕ್ಷಿಗೆ ಸಹಿ ಹಾಕಿದವರ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಗೂಳಿಹಟ್ಟಿ ಆಗ್ರಹಿಸಿದ್ದಾರೆ. ಸದ್ಯ ಗೂಳಿಹಟ್ಟಿ ನೀಡಿರುವ ದೂರಿನನ್ವಯ ಆರೋಪಿಗಳ ವಿರುದ್ಧ ಸಂಜಯನಗರ ಠಾಣೆ ಪೊಲೀಸರು ಭಾರತೀಯ ದಂಡ ಸಂಹಿತೆ 420, 465, 468, 471 ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ತನಿಖೆಯನ್ನು ಆರಂಭಿಸಿದ್ದಾರೆ.