ನ್ಯೂಸ್

ಅಸೆಂಬ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಬಿಜೆಪಿ ನಾಯಕರಿಗೆ RSS ಖಡಕ್ ಎಚ್ಚರಿಕೆ!

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿದೆ. ಸಾಲು ಸಾಲು ಸಮಾವೇಶಗಳು ಹಾಗೂ ಸಭೆಗಳು ನಡೆಯುತ್ತಿದ್ದು, ಕಾಂಗ್ರೆಸ್​, ಬಿಜೆಪಿ ಹಾಗೂ ಜೆಡಿಎಸ್​ ಮೂರು ಪಕ್ಷಗಳು ಭರ್ಜರಿ ಕಸರತ್ತು ನಡೆಸುತ್ತಿವೆ. ಇದರ ನಡುವೆ ಆಡಳಿತಾರೂಢ ಬಿಜೆಪಿ ನಾಯಕರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ಖಡಕ್​ ಎಚ್ಚರಿಕೆಯನ್ನು ನೀಡಿದೆ.

ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿ ಇರುವಾಗಲೇ ತನ್ನ ಸಮೀಕ್ಷಾ ವರದಿಯನ್ನು ಆಧರಿಸಿ ಆರ್​ಎಸ್​ಎಸ್​ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದೆ. ಸರ್ಕಾರ ಹಾಗೂ ಶಾಸಕರು ಇಬ್ಬರಿಗೂ ಪ್ರಬಲ ಆಢಳಿತ ವಿರೋಧಿ ಅಲೆ ಇದೆ ಎಂದು ಆರ್​ಎಸ್​ಎಸ್​ ಹೇಳಿದೆ.

ರಾಜ್ಯದಲ್ಲಿ 40 ಪರ್ಸೆಂಟ್ ಶಾಸಕರಿಗೆ ಆಡಳಿತ ವಿರೋಧಿ ಅಲೆ ಇದೆ. ಬಿಜೆಪಿ ಶಾಸಕರು ಜನರಿಂದ ದೂರವಾಗಿದ್ದಾರೆ ಎಂಬ ಭಾವನೆ ಇದೆ. ಆಡಳಿತ ವಿರೋಧಿ ಅಲೆಯಿಂದ ಪಾರಾಗಲು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಆರ್​ಎಸ್​ಎಸ್​ ಎಚ್ಚರಿಸಿದೆ.

ಸರ್ಕಾರದ ಸಾಧನೆ ಬಿಂಬಿಸುವುದರಲ್ಲಿ ಬಿಜೆಪಿ ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳು ಜನರನ್ನು ತಲುಪಿಲ್ಲ. ಮೋದಿ ಜನಪ್ರಿಯತೆಯನ್ನು ಬಳಸಿಕೊಳ್ಳಲಾಗದ ಸ್ಥಿತಿಯಲ್ಲಿ ರಾಜ್ಯ ಬಿಜೆಪಿ ಇದೆ. ತಕ್ಷಣವೇ ಪಕ್ಷ ಮತ್ತು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಆರ್​ಎಸ್ಎಸ್ ಸಲಹೆ ನೀಡಿದೆ ಎಂದು ದಿಗ್ವಿಜಯ ನ್ಯೂಸ್​ಗೆ ಬಿಜೆಪಿಯ ಉನ್ನತ ಮೂಲಗಳಿಂದ ಮಾಹಿತಿ ಬಂದಿದೆ. (ದಿಗ್ವಿಜಯ ನ್ಯೂಸ್​)