ನ್ಯೂಸ್

ಆನೇಕಲ್ ತಹಸೀಲ್ದಾರ್ ಕಚೇರಿಯ ಕುರ್ಚಿಯಲ್ಲಿ ಮಹಿಳೆ ಕುಳಿತಿರುವ ಪೋಟೋ ವೈರಲ್​! ಜಿಲ್ಲಾಧಿಕಾರಿಗೆ ದೂರು

ಬೆಂಗಳೂರು: ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ​ ತಹಸೀಲ್ದಾರ್ ಕಚೇರಿಯ ಕುರ್ಚಿಯಲ್ಲಿ ಓರ್ವ ಮಹಿಳೆ ಕುಳಿತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಚೇರಿ ದುರುಪಯೋಗ ಆರೋಪ ಕೇಳಿಬಂದಿದೆ.

ಕುರ್ಚಿಯಲ್ಲಿ ಕುಳಿತು ಪೋನ್​​ನಲ್ಲಿ ಮಾತನಾಡುತ್ತಿರುವ ಮಹಿಳೆಯ ಫೋಟೋ ವೈರಲ್​ ಆಗಿದೆ. ಆನೇಕಲ್ ತಹಸೀಲ್ದಾರ್ ಶಿವಪ್ಪ ಲಮಾಣಿ ಅವರು ಕಾರ್ಯನಿರ್ವಹಿಸುತ್ತಿರುವ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಸ್ವತಃ ತಹಸೀಲ್ದಾರ್ ಅವರೇ ತಮ್ಮ ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಪೋಟೋ ಹಾಕಿಕೊಂಡು ಮಹಿಳೆಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು ಎನ್ನುವ ಆರೋಪ ಕೇಳಿಬಂದಿದೆ.

ಈ ಘಟನೆಯ ಬೆನ್ನಲ್ಲೇ ಕೆಆರ್​ಎಸ್​ ಪಕ್ಷದಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ತಹಸೀಲ್ದಾರ್ ಕಚೇರಿ ದುರ್ಬಳಕೆ ಮಾಡಿಕೊಂಡಿರುವ ಮಹಿಳೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಪೋಟೋವನ್ನು ಸ್ಟೇಟಸ್​ನಲ್ಲಿ ಹಾಕಿಕೊಂಡ ತಹಸೀಲ್ದಾರ್ ವಿರುದ್ಧವು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. (ದಿಗ್ವಿಜಯ ನ್ಯೂಸ್​)