ಕೊಲ್ಕತ : ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದ ಹಿರಿಯ ಬಂಗಾಳಿ ಚಿತ್ರನಿರ್ದೇಶಕ ಮತ್ತು ಖ್ಯಾತ ಕವಿ ಬುದ್ಧದೇಬ್ ದಾಸ್ಗುಪ್ತ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಚಿತ್ರರಂಗದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.
77 ವರ್ಷ ವಯಸ್ಸಾಗಿದ್ದ ದಾಸ್ಗುಪ್ತ ಸ್ವಲ್ಪಕಾಲದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ದಕ್ಷಿಣ ಕೊಲ್ಕತದ ತಮ್ಮ ನಿವಾಸದಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ಅವರು ನಿದ್ದೆಯಲ್ಲೇ ಸಹಜ ಸಾವು ಹೊಂದಿದ್ದಾರೆ.
ದಾಸ್ಗುಪ್ತ ಅವರ ಐದು ಸಿನಿಮಾಗಳಿಗೆ ಅತ್ಯುತ್ತಮ ಚಲನಚಿತ್ರಕ್ಕಾಗಿ ನೀಡುವ ನ್ಯಾಷನಲ್ ಫಿಲಂ ಅವಾರ್ಡ್ಗಳು ಲಭಿಸಿವೆ, ಎರಡು ಬಾರಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಮೇ 2008 ರಲ್ಲಿ ಮ್ಯಾಡ್ರಿಡ್ನಲ್ಲಿ ನಡೆದ ಸ್ಪೈನ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ನಲ್ಲಿ ಅವರಿಗೆ ಲೈಫ್ಟೈಮ್ ಅಚೀವ್ಮೆಂಟ್ ಅವಾರ್ಡ್ ಲಭಿಸಿತ್ತು. ಬಾಗ್ ಬಹದೂರ್, ಲಾಲ್ ದರ್ಜಾ, ಕಾಲ್ಪುರುಷ್ ಮತ್ತು ಮಿಥುನ್ ಚಕ್ರವರ್ತಿ ನಟಿಸಿದ ತಹದೆರ್ ಕಥಾ ಅವರು ನಿರ್ದೇಶಿಸಿದ ಜನಪ್ರಿಯ ಚಿತ್ರಗಳು. (ಏಜೆನ್ಸೀಸ್)