ನ್ಯೂಸ್

ನಮ್ಮ ಮನೆ ಬಾಗಿಲು ತಟ್ಟುವ ಅಸಹಾಯಕರಿಗೆ ಆಶ್ರಯ ನೀಡಲು ಸಿದ್ಧ; ಮಮತಾ ಬ್ಯಾನರ್ಜಿ

ಕೋಲ್ಕತಾ: ಸರ್ಕಾರಿ ಉದ್ಯೋಗದಲ್ಲಿನ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆ ಸಾಕ್ಷಿಯಾಗಿರುವ ನೆರೆಯ ರಾಷ್ಟ್ರದ ಅಸಹಾಯಕ ಜನರಿಗೆ ಆಶ್ರಯ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಯಾರೇ ಅಸಹಾಯಕರು ಬಂಗಾಳದ ಬಾಗಿಲು ತಟ್ಟಿದರೆ ನಾನು ಸಹಾಯ ಮಾಡುತ್ತೇನೆ. ನಿಮ್ಮ ಕುಟುಂಬ ಬಾಂಗ್ಲಾದೇಶದಲ್ಲಿದ್ದರೆ, ಯಾರಾದರೂ ಓದಲು ಹೋಗಿದ್ದರೆ, ಯಾರಾದರೂ ವೈದ್ಯಕೀಯ ಚಿಕಿತ್ಸೆಗಾಗಿ ಹಿಂತಿರುಗಲು ಸಾಧ್ಯವಾಗುತ್ತಿಲ್ಲವಾದರೆ, ಯಾವುದೇ ರೀತಿಯ ಸಹಾಯ ಬೇಕಾದರೆ ನಾವು ಮಾಡುತ್ತೇವೆ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

ಬಾಂಗ್ಲಾದೇಶ ಸಾರ್ವಭೌಮ ರಾಷ್ಟ್ರವಾಗಿರುವುದರಿಂದ ನಾನು ಅದರ ವ್ಯವಹಾರಗಳ ಬಗ್ಗೆ ಮಾತನಾಡಬಾರದು. ಈ ವಿಷಯದ ಬಗ್ಗೆ ಏನು ಹೇಳಬೇಕೋ ಅದನ್ನು ಕೇಂದ್ರ ಸರ್ಕಾರ ಹೇಳುತ್ತದೆ. ಆದರೆ ಅಸಹಾಯಕರು ಬಂಗಾಳದ ಬಾಗಿಲು ತಟ್ಟಿದರೆ ಖಂಡಿತಾ ನಾವು ಅವರಿಗೆ ಆಶ್ರಯ ನೀಡುತ್ತೇವೆ. ನಾನು ಇಷ್ಟು ಹೇಳಬಲ್ಲೆ, ಏಕೆಂದರೆ ಪ್ರಕ್ಷುಬ್ಧತೆಯ ಅಡಿಯಲ್ಲಿ ಇರುವ ಪ್ರದೇಶಗಳ ಪಕ್ಕದ ಪ್ರದೇಶಗಳಲ್ಲಿ ನಿರಾಶ್ರಿತರಿಗೆ ಅವಕಾಶ ಕಲ್ಪಿಸಲು ವಿಶ್ವಸಂಸ್ಥೆ ನಿರ್ಣಯವಿದೆ ಎಂದು ತಿಳಿಸಿದರು.

ವಿಶ್ವದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿರುವ ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಚೋದನೆ ಮಾಡಬೇಡಿ. ನಾವು ಸಂಯಮದಿಂದ ವರ್ತಿಸಬೇಕು ಎಂದು ಅವರು ಹೇಳಿದರು. (ಏಜೆನ್ಸೀಸ್​​)