ನ್ಯೂಸ್

ಬಂಗಾಳದ ಕಾರ್ಮಿಕನಿಗೆ ಕೇರಳದಲ್ಲಿ ಒಲಿಯಿತು ಅದೃಷ್ಟ; ಲಾಟರಿಯಲ್ಲಿ ಹಣ ಗೆಲ್ಲುತ್ತಿದ್ದಂತೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ!

ಕೇರಳ: ಪಶ್ಚಿಮ ಬಂಗಾಳದಿಂದ ಕೂಲಿ ಕೆಲಸ ಹುಡುಕುತ್ತಾ ಕೇರಳಕ್ಕೆ ಬಂದಿದ್ದ ಕಾರ್ಮಿಕನೊಬ್ಬನ ಅದೃಷ್ಟ ಬದಲಾಗಿದೆ. ದಿನಗೂಲಿ ನೌಕರನಾಗಿದ್ದ ಈತ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಲಕ್ಷಾಧಿಪತಿಯಾಗಿದ್ದಾನೆ. ಇದಕ್ಕೆ ಕಾರಣ ಕೇರಳ ಸರ್ಕಾರದ ಸ್ತ್ರೀ ಶಕ್ತಿ ಲಾಟರಿ.

ಪಶ್ಚಿಮ ಬಂಗಾಳ ಮೂಲದ ಎಸ್.ಕೆ.ಬದೇಶ್ ಎಂಬಾತ ಕೇರಳ ಸರ್ಕಾರದ ಸ್ತ್ರೀ ಶಕ್ತಿ ಲಾಟರಿ ಖರೀದಿಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ. ಸದ್ಯ ಲಾಟರಿಯಲ್ಲಿ 75 ಲಕ್ಷ ರೂಪಾಯಿ ಗೆದ್ದಿಕೊಂಡು, ಅಚ್ಚರಿ ಮೂಡಿಸಿದ್ದಾನೆ. ಸ್ವಾರಸ್ಯವೆಂದರೆ, ಲಾಟರಿ ಮೂಲಕ ಹಣ ಗೆದ್ದಿರುವುದು ಗೊತ್ತಾಗುತ್ತಿದ್ದಂತೆ ಹತ್ತಿರದ ಪೊಲೀಸ್ ಠಾಣೆಗೆ ಓಡೋಡಿ ಬಂದಿದ್ದಾನೆ.

ರಕ್ಷಣೆ ಕೋರಿ ಠಾಣೆ ಮೆಟ್ಟಿಲೇರಿದ!

ಲಾಟರಿಯಲ್ಲಿ 75 ಲಕ್ಷ ರೂಪಾಯಿ ಗೆಲ್ಲುತ್ತಿದ್ದಂತೆ ಭಯಭೀತನಾದ ಬದೇಶ್, ಮುವಾಟ್ಟುಪುಳ ಪೊಲೀಸ್ ಠಾಣೆಗೆ ಬಂದು, ಬಹುಮಾನದ ಮೊತ್ತಕ್ಕೆ ರಕ್ಷಣೆ ನೀಡುವಂತೆ ಕೋರಿದ್ದಾನೆ. ಈ ವೇಳೆ ಪೊಲೀಸರು ಲಾಟರಿ ಹಣದ ಬಗ್ಗೆ ಸಂಪೂರ್ಣವಾಗಿ ವಿವರಿಸಿ, ಆತನ ಭಯ ಹಾಗೂ ಗೊಂದಲವನ್ನು ನಿವಾರಿಸಿದ್ದಾರೆ.

ಲಾಟರಿ ಗೆದ್ದಿರುವ ಸುದ್ದಿ ಪ್ರಚಾರ ಪಡೆದುಕೊಳ್ಳುತ್ತಿದ್ದಂತೆ ಎಸ್​.ಕೆ.ಬದೇಶ್ ಭಯಗೊಂಡಿದ್ದ. ಯಾರಾದರು ಬಂದು ಟಿಕೆಟ್​ ಕಸಿದುಕೊಂಡರೆ ಎಂಬ ಚಿಂತೆಯಲ್ಲಿ ಪೊಲೀಸ್ ಠಾಣೆಗೆ ಬಂದು ರಕ್ಷಣೆ ಕೋರಿದ್ದಾನೆ. ಆತನಿಗೆ ಬೇಕಾದ ಎಲ್ಲಾ ಭದ್ರತೆ ಒದಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದ!

ಬಂಗಾಳದಿಂದ ಬಂದಿದ್ದ ಬದೇಶ್​ಗೆ ಕೇರಳದಲ್ಲಿ ಲಾಟರಿ ಟಿಕೆಟ್ ಪರಿಚಯವಾಗಿದೆ. ಹೀಗಾಗಿ ಅನೇಕ ಬಾರಿ ಅದೃಷ್ಟ ಪರೀಕ್ಷಗೆ ಇಳಿದಿದ್ದ. ಎರ್ನಾಕುಲಂನ ಚೊಟ್ಟಾನಿಕರದಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಸ್ತ್ರೀ ಶಕ್ತಿ ಲಾಟರಿ ಟಿಕೆಟ್ ಖರೀದಿಸಿದ್ದು, ಅದೃಷ್ಟ ಕೈಗೂಡಿದೆ.

ಎಸ್.ಕೆ.ಬದೇಶ್ ಹಣ ಗೆಲ್ಲುತ್ತಿದ್ದಂತೆ ಮರಳಿ ತವರು ರಾಜ್ಯಕ್ಕೆ ತೆರಳಲು ನಿರ್ಧರಿಸಿದ್ದಾನೆ. ಗೆದ್ದಿರುವ ಹಣದಲ್ಲಿ ಹುಟ್ಟೂರಿನಲ್ಲಿರುವ ಮನೆಯನ್ನು ನವೀಕರಿಸಬೇಕು. ಬಳಿಕ ಕೃಷಿಯನ್ನು ಇನ್ನಷ್ಟು ವಿಸ್ತರಿಸಬೇಕಿದೆ ಎಂದು ಹೇಳಿಕೊಂಡಿದ್ದಾನೆ. (ಏಜೆನ್ಸೀಸ್)