ನ್ಯೂಸ್

''ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಡ್ರಾಮಾ ಬಿಟ್ಟು ರಾಜೀನಾಮೆ ನೀಡೋದೇ ಒಳ್ಳೇದು''

ಹುಬ್ಬಳ್ಳಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡುವುದೇ ಒಳ್ಳೆಯದು. ಮಮತಾ ಬ್ಯಾನರ್ಜಿ ಅವರು ರಾಜೀನಾಮೆಯ ನಾಟಕವಾಡುತ್ತಿದ್ದಾರೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಆಗಿ ಸರ್ಕಾರ ಮುನ್ನಡೆಸಲು ಅವರು ಸಮರ್ಥರಿಲ್ಲ. ಅಧಿಕಾರ ನೀಡಿದ ಜನರಿಗೆ ನ್ಯಾಯ ಒದಗಿಸುವಲ್ಲಿ ಸಹ ವೈಫಲ್ಯ ಕಂಡಿದ್ದಾರೆ. ಸಮುದಾಯಕ್ಕೆ ಅವಮಾನ ಮಾಡುತ್ತಲೇ ಬಂದಿದ್ದಾರೆ.

ಇದೇ ಪ್ರವೃತ್ತಿ ಮುಂದುವರಿಸುವ ಬದಲು ರಾಜೀನಾಮೆ ನೀಡುವುದೇ ಸೂಕ್ತ. ಮಮತಾ ಬ್ಯಾನರ್ಜಿ ಅವರ ರಾಜೀನಾಮೆ ಹೇಳಿಕೆ ಕೇವಲ ಡ್ರಾಮಾ. ಜನರೆದುರು ಈ ರೀತಿ ಕಣ್ಣಾ ಮುಚ್ಚಾಲೆ ಆಡುವುದು ಬೇಡ. ಬದಲಿಗೆ ರಾಜೀನಾಮೆ ನೀಡಲಿ ಎಂದು ಜೋಶಿ ಹೇಳಿದರು.

ನಮ್ಮ ಸರ್ಕಾರಕ್ಕೆ ಅವಮಾನ ಮಾಡಲಾಗುತ್ತಿದೆ. ಇದರಲ್ಲಿ ರಾಜಕೀಯ ಬಣ್ಣ ಇದೆ. ಜನರ ಹಿತಾಸಕ್ತಿ ಸಲುವಾಗಿ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು.

ಅರವಿಂದ ಕೇಜ್ರಿವಾಲ್ ದೋಷಮುಕ್ತರಾಗಿಲ್ಲ: ದೆಹಲಿ ಸಿಎಂ ಆಗಿದ್ದ ಅರವಿಂದ ಕೇಜ್ರಿವಾಲ್ ಅವರಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಆದರೆ, ಅವರಿನ್ನೂ ದೋಷಮುಕ್ತರಾಗಿ ಹೊರ ಬಂದಿಲ್ಲ. ಲಾಲೂ ಪ್ರಸಾದ್ ಯಾದವ್ ಅವರಿಗೂ ಬೇಲ್ ಸಿಕ್ಕಿತ್ತು, ಕೊನೆಗೆ ಶಿಕ್ಷೆಗೆ ಗುರಿಯಾದರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ನ್ಯಾಯಾಂಗ ವ್ಯವಸ್ಥೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಆದರೆ, ನ್ಯಾಯಾಲಯ ಅವರನ್ನು ಇನ್ನೂ ಆರೋಪಮುಕ್ತ ಮಾಡಿಲ್ಲ. ಬಿಜೆಪಿಗೆ ನ್ಯಾಯಾಂಗದ ಮೇಲೆ ನಂಬಿಕೆಯಿದೆ ಎಂದು ಹೇಳಿದರು.

ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಅತ್ಯುನ್ನತವಾಗಿದೆ ಮತ್ತು ಅತ್ಯಂತ ಶ್ರೇಷ್ಠವಾಗಿದೆ ಎಂಬುದಕ್ಕೆ ಇದು ನಿದರ್ಶನ. ದೇಶದಲ್ಲಿ ಕೋರ್ಟಗಳು ನ್ಯಾಯಯುತವಾಗಿ, ಅತ್ಯಂತ ನಿಷ್ಪಕ್ಷವಾಗಿ ಕೆಲಸ ಮಾಡುತ್ತಿವೆ. ಇದನ್ನು, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಅರಿಯಲಿ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.