ಕೋಲಾರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಗುಣಮಟ್ಟದ ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ಸುಧಾರಿತ ಯಂತ್ರಗಳು ಮತ್ತು ಆಧುನಿಕ ತಾಂತ್ರಿಕತೆಗಳ ಅರಿವು ಕಾರ್ಯಾಗಾರವನ್ನು ರೇಷ್ಮೆ ಗೂಡಿನ ಮಾರುಕಟ್ಟೆ ಉಪ ನಿರ್ದೇಶಕ ಎಂ.ನಾಗರಾಜ್​ ಉದ್ಘಾಟಿಸಿದರು. ಡಾ.ಶಿವಾನಂದ ಹೊನಗಲ್​, ಚಂದ್ರಶೇಖರ್​ಗೌಡ ಇದ್ದರು. 
ನ್ಯೂಸ್

ನೂತನ ಪದ್ಧತಿ ಅಳವಡಿಕೆಯಿಂದ ಲಾಭ

ಕಿರುವಾರ ಎಸ್.ಸುದರ್ಶನ್

ಕೋಲಾರ: ಹೊಸ ಯಂತ್ರಗಳ ಮೂಲಕ ನಿರೀೆಗೂ ಮೀರಿ ರೇಷ್ಮೆ ನೂಲು ತೆಗೆಯಬಹುದು. ಇದೀಗ ಆಟೋಮೆಟಿಕ್​ ರೀಲಿಂಗ್​ ಯಂತ್ರಗಳು ಬಂದಿದ್ದು, ಕೇಂದ್ರಗಳಲ್ಲಿ ಅಳವಡಿಸಿಕೊಂಡು ಹೆಚ್ಚು ಲಾಭಗಳಿಸುವ ಮಾರ್ಗ ಕಂಡುಕೊಳ್ಳಬೇಕು ಎಂದು ರೇಷ್ಮೆ ಗೂಡಿನ ಮಾರುಕಟ್ಟೆ ಉಪ ನಿರ್ದೇಶಕ ಎಂ.ನಾಗರಾಜ್​ ಹೇಳಿದರು.

ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಐಸಿಎಆರ್​ ಕೃಷಿ ವಿಜ್ಞಾನ, ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ, ರೇಷ್ಮೆ ಇಲಾಖೆ ಹಾಗೂ ರೇಷ್ಮೆ ತಾಂತ್ರಿಕ ಸಂಶೋಧನಾ ಸಂಸ್ಥೆಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಗುಣಮಟ್ಟದ ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ಸುಧಾರಿತ ಯಂತ್ರಗಳು ಮತ್ತು ಆಧುನಿಕ ತಾಂತ್ರಿಕತೆಗಳ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬಿಚ್ಚಾಣಿಕೆದಾರರು ಹಿಂದೆ ಚರಕ, ಕಾಟೇಜ್​ ಬೆಸಿನ್​, ಮಲ್ಟಿ ಎಂಡ್​ ರೀಲಿಂಗ್​ ಯಂತ್ರಗಳನ್ನು ಬಳಸಿ ರೇಷ್ಮೆನೂಲು ಬಿಚ್ಚಾಣಿಕ ಮಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಆಟೋಮೆಟಿಕ್​ ರೀಲಿಂಗ್​ ಯಂತ್ರದ ಮೂಲಕ ದಿನಕ್ಕೆ 1,000 ಕೆ.ಜಿ. ರೇಷ್ಮೆಗೂಡಿನಿಂದ ನೂಲನ್ನು ತೆಗೆಯಬಹುದು. ಕೇಂದ್ರ ರೇಷ್ಮೆ ಮಂಡಳಿಯಿಂದ ದೊರಕುವ ಸೌಲಭ್ಯಗಳನ್ನು ಬಳಸಿಕೊಂಡು ನೂತನ ಯಂತ್ರಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಶಿವಾನಂದ ಹೊಂಗಲ ಮಾತನಾಡಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಶೇ.40 ಪಾಲನ್ನು ಹೊಂದಿದ್ದು, ಆಟೋಮೆಟಿಕ್​ ರೀಲಿಂಗ್​ ಯಂತ್ರ ಬಳಸಿ ಕಡಿಮೆ ಅವಧಿಯಲ್ಲಿ ರೇಷ್ಮೆ ಉತ್ಪಾದಿಸಬಹುದು. ಬಿಚ್ಚಾಣಿಕೆದಾರರು ಇಲಾಖೆಯ ಸಹಾಯಧನ ಪಡೆದು ಆರ್ಥಿಕ ಅಭಿವೃದ್ಧಿ ಹೊಂದಬಹುದು ಎಂದು ತಿಳಿಸಿದರು.

ಶಿಡ್ಲಟ್ಟ ರೇಷ್ಮೆ ತಾಂತ್ರಿಕ ಸೇವಾ ಕೇಂದ್ರ ಡಾ.ಕೆ.ಎನ್​.ಮಹೇಶ್​ ಮಾತನಾಡಿ, ರೇಷ್ಮೆನೂಲು ಉತ್ಪಾದನೆಗೆ ರೇಷ್ಮೆಗೂಡಿನ ಗುಣಮಟ್ಟ, ಆಕಾರ, ಗಾತ್ರ, ಗೂಡಿನ ತೂಕ, ರೆಂಡಿಟಾ, ಶೇಖಡವಾರು ನೂಲು ಬಿಚ್ಚಾಣಿಕೆ, ನೂಲು ಬಿಚ್ಚಾಣಿಕೆ ಪ್ರಕ್ರಿಯೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು.

ನೀರಿನ ಗುಣಮಟ್ಟ, ನೂಲು ಬಿಚ್ಚಾಣಿಕೆದಾರರ ಕಾರ್ಯಕ್ಷಮತೆ ಮತ್ತು ಕೌಶಲ, ಕೆಲಸ ಮಾಡುವ ಪರಿಸರ ಪ್ರಮುಖವಾಗಿ ಒಳಗೊಂಡಿರುವ ಬಗ್ಗೆ ಗಮಹರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೋಲಾರ ರೇಷ್ಮೆ ತಾಂತ್ರಿಕ ಸೇವಾ ಕೇಂದ್ರ ವಿಸ್ತರಣಾಧಿಕಾರಿ ಎನ್​.ಚಂದ್ರಶೇಖರ್​ಗೌಡ, ಶ್ರೀನಿವಾಸಪುರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ ವಿಸ್ತರಣಾಧಿಕಾರಿ ಸಂಗನಬಸಯ್ಯಮಠ, ವಿಜ್ಞಾನಿಗಳಾದ ಡಾ.ಕೆ.ಆರ್​.ಶಶಿಧರ್​, ಡಾ.ಮಂಜುನಾಥರೆಡ್ಡಿ ಟಿ.ಬಿ, ಜಿ.ಆರ್​.ಸ್ವಾತಿ ಹಾಜರಿದ್ದರು.