ನ್ಯೂಸ್

ಬೆನಜೀರ್ ಭುಟ್ಟೋ ಕಿರಿ ಮಗಳು ಅಸೀಫಾ ರಾಜಕೀಯಕ್ಕೆ

ಕರಾಚಿ: ಪಾಕಿಸ್ತಾನದ ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೋ ಅವರ ಕಿರಿಯ ಪುತ್ರಿ ಅಸೀಫಾ ಭುಟ್ಟೋ ಝರ್ದಾರಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಮುಲ್ತಾನ್​ನಲ್ಲಿ ಸೋಮವಾರ 11 ಪಕ್ಷಗಳ ವಿಪಕ್ಷ ಮೈತ್ರಿ ಕೂಟ ಪಾಕಿಸ್ತಾನ್​ ಡೆಮಾಕ್ರಟಿಕ್ ಮೂವ್​ಮೆಂಟ್​ (ಪಿಡಿಎಂ) ರಾಲಿಯಲ್ಲಿ ಅವರು ಸಹೋದರ ಬಿಲಾವಲ್ ಭುಟ್ಟೋ ಪರವಾಗಿ ರಾಜಕೀಯ ರಂಗ ಪ್ರವೇಶಿಸಿ ಭಾಷಣ ಮಾಡಿ ಗಮನಸೆಳೆದಿದ್ದಾರೆ.

ಅವರು ಹೇಳಿದ್ದಿಷ್ಟು- ಇಂದು ನಿಮ್ಮಲ್ಲೊಬ್ಬಳಾಗಿ ಇಲ್ಲಿ ನಿಂತಿದ್ದೇನೆ. ನನ್ನ ಸಹೋದರ, ನಿಮ್ಮೆಲ್ಲರ ಸೋದರ ಪಕ್ಷದ ಚೇರ್​ಮನ್​ ಬಿಲಾವಲ್ ಭುಟ್ಟೋ ಝರ್ದಾರಿ ಕರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ನಿಮ್ಮ ಎದುರು ನಿಂತಿದ್ದೇನೆ. ನನ್ನ ತಾಯಿಯನ್ನು ಹೇಗೆ ಬೆಂಬಲಿಸಿದ್ದೀರೋ ಅದೇ ರೀತಿ ನನ್ನ ಸಹೋದರನಿಗೂ ನೀವು ಬೆಂಬಲ ನೀಡುವಿರೆಂಬ ಭರವಸೆ ನನಗಿದೆ. ಪ್ರತಿ ಹೆಜ್ಜೆಯಲ್ಲೂ ನಿಮ್ಮೊಂದಿಗೆ ನಾನಿದ್ದೇನೆ. ನನ್ನ ಸಹೋದರನಿಗೆ ನಿಮ್ಮಂತೆಯೇ ಬೆಂಬಲವನ್ನೂ ನೀಡುವೆ.

ಪಾಕಿಸ್ತಾನ್​ ಪೀಪಲ್ಸ್ ಪಾರ್ಟಿಯ ಕಾರ್ಯಕರ್ತರು, ನಾಯಕರನ್ನು ಸರ್ಕಾರ ವಿನಾಕಾರಣ ಬಂಧಿಸಿದೆ. ಅವರ ಸಹೋದರಿಯರು ಮನೆಯಿಂದ ಹೊರಗೆ ಬಂದು ದೇಶದ ಪ್ರಜಾಪ್ರಭುತ್ವದ ಪರವಾಗಿ ಧ್ವನಿ ಎತ್ತಲಾರಂಭಿಸಿದ್ದಾರೆ. ಇದು ಸರ್ಕಾರಕ್ಕೆ ಎಚ್ಚರಿಕೆಯ ಘಂಟೆ ಎಂದು ಅಸೀಫಾ ಎಚ್ಚರಿಸಿದ್ದಾರೆ. (ಏಜೆನ್ಸೀಸ್)