ನ್ಯೂಸ್

ಬೇಲೂರು-ಚಿಕ್ಕಮಗಳೂರು ರೈಲು ಯೋಜನೆ ಶೀಘ್ರ ಪೂರ್ಣ

ಹಳೇಬೀಡು: ಹಾಸನ-ಬೇಲೂರು-ಚಿಕ್ಕಮಗಳೂರು ರೈಲು ಯೋಜನೆಯ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಹಳೇಬೀಡು ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಗುರುವಾರ ಭೇಟಿ ನೀಡಿದ ಬಳಿಕ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆ ಮತ್ತು ಬೇಲೂರು ತಾಲೂಕಿನ ಜನರ ದಶಕಗಳ ಕನಸಾದ ಚಿಕ್ಕಮಗಳೂರು -ಬೇಲೂರು-ಹಾಸನ ಸಂಪರ್ಕ ರೈಲ್ವೆ ವ್ಯವಸ್ಥೆ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗುತ್ತಿದ್ದು, ಈ ಭಾಗದ ಜನರಿಗೆ ಶೀಘ್ರದಲ್ಲಿ ಉತ್ತಮವಾದಂತಹ ರೈಲ್ವೆ ಸಂಚಾರ ವ್ಯವಸ್ಥೆ ಲಭ್ಯವಾಗಲಿದೆ ಎಂದರು. ಇದೇ ವೇಳೆ ಬೇಲೂರು-ಹಳೇಬೀಡು ಮೂಲಕ ಅರಸೀಕೆರೆ ನಿಲ್ದಾಣವನ್ನು ಸಂಪರ್ಕಿಸುವಂತಹ ರೈಲ್ವೆ ವ್ಯವಸ್ಥೆಯನ್ನು ಮಾಡಿಕೊಡುವಂತೆ ಪ್ರಸ್ತಾಪಿಸಿದ ಸಾರ್ವಜನಿಕರ ಮನವಿಯನ್ನು ಆಲಿಸಿ, ಈಗಿನ ಕಾಮಗಾರಿ ಪೂರ್ಣಗೊಂಡ ನಂತರ ಪ್ರಸ್ತಾವನೆಯ ಬಗ್ಗೆ ಪರಿಶೀಲಿಸಲಾಗುವುದೆಂದು ತಿಳಿಸಿದರು.

ಮುಸಲ್ಮಾನರಿಲ್ಲದೆ ಭಯೋತ್ಪಾದನೆ ಇಲ್ಲ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ. ಆದರೆ ಮುಸ್ಲಿಮರಿಲ್ಲದೆ ಭಯೋತ್ಪಾದನೆ ಇಲ್ಲ. ಉಗ್ರರ ಕೃತ್ಯಗಳನ್ನು ಮಟ್ಟ ಹಾಕುವ ಕೆಲಸವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಖಂಡಿತ ಮಾಡಲಿದ್ದಾರೆ ಎಂದು ತಿಳಿಸಿದರು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಿಮ್ಮದು ಯಾವ ಧರ್ಮ ಎಂದು ಕೇಳಿ ಅಮಾಯಕ ಹಿಂದು ಪ್ರವಾಸಿಗರ ಮೇಲೆ ಗುಂಡುಗಳನ್ನು ಹಾರಿಸಿರುವುದು ಅಮಾನವೀಯ. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಈಗಾಗಲೇ ದಿಟ್ಟ ಹೆಜ್ಜೆ ಇಟ್ಟಿದ್ದು, ಪಾಕಿಸ್ತಾನದ ವಿರುದ್ಧ ಎಲ್ಲ ರೀತಿಯ ರಾಜತಾಂತ್ರಿಕ ವ್ಯವಸ್ಥೆಯನ್ನು ನಿಬರ್ಂಧ ಗೊಳಿಸುವ ಮೂಲಕ ಉಗ್ರರ ಗುರಿ-ಉದ್ದೇಶಗಳು ಈಡೇರಲು ಬಿಡುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ. ಇಂತಹ ಅಮಾನವೀಯ ದುರ್ಘಟನೆ ನಡುವೆಯೂ ಶ್ರೀರಂಗಪಟ್ಟಣದ ಶಾಸಕರು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಮೂರ್ಖತನದ ಪರಮಾವಧಿ. ದೇಶದ ವಿಷಯ ಬಂದಾಗ ರಾಜಕಾರಣ ಹೊರಗಿಟ್ಟು ಒಗ್ಗಟ್ಟು ತೋರುವ ಪ್ರಯತ್ನ ಪ್ರತಿಯೊಬ್ಬರಿಂದಲೂ ಆಗಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ತಾಪಂ ಮಾಜಿ ಸದಸ್ಯ, ಸೋಮಶೇಖರ್ ಮುಖಂಡ ಹರೀಶ್, ರಮೇಶ್, ರಂಜಿತ್, ಸುನಿಲ್, ಗಂಗೂರ್ ಶಿವಕುಮಾರ್, ರೇಣುಕುಮಾರ್, ಹರೀಶ್ ಕಡಗೂರು, ಬಸವರಾಜ್ ಮತ್ತಿತರರು ಹಾಜರಿದ್ದರು.