ಬೇಲೂರು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆಯೇ ಮಾತಿನ ಚಕಮಕಿ ನಡೆಯಿತು. 
ನ್ಯೂಸ್

ಗದ್ದಲದಲ್ಲೇ ನಡೆದ ಬೇಲೂರು ಬಜೆಟ್ ಸಭೆ

ಬೇಲೂರು: ಇಲ್ಲಿನ ಪುರಸಭೆ ಬಜೆಟ್ ಹಿನ್ನ್ನೆಲೆಯಲ್ಲಿ ಕರೆಯಲಾಗಿದ್ದ ಸಭೆ ಸದಸ್ಯರ ನಡುವಿನ ಗದ್ದಲಕ್ಕೆ ಸಾಕ್ಷಿಯಾಗಿ, ಕೋಲಾಹಲ ಉಂಟಾಯಿತು. ಸ್ವಪಕ್ಷೀಯ ಸದಸ್ಯರೇ ಸಭೆ ಬಹಿಷ್ಕರಿಸಿ ಹೊರನಡೆದ ಪ್ರಸಂಗ ನಡೆಯಿತು.

ಅಧ್ಯಕ್ಷ ಎ.ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಸಾಮಾನ್ಯ ಹಾಗೂ ಬಜೆಟ್ ಸಭೆಯಲ್ಲಿ ಸದಸ್ಯ ಬಿ.ಗಿರೀಶ್ ಮಾತನಾಡುತಿದ್ದ ಸಂದರ್ಭ ಸದಸ್ಯ ಜಗದೀಶ್ ಮಧ್ಯ ಪ್ರವೇಶಿಸಿದ್ದರಿಂದ ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆಯಿತು. ಇತರ ಸದಸ್ಯರು ಮಧ್ಯ ಪ್ರವೇಶಿಸಿದ್ದರಿಂದ ಸಭೆಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯದಂತಾಗಿ, ಸ್ವಪಕ್ಷೀಯ ಕಾಂಗ್ರೆಸ್‌ನ ಕೆಲ ಸದಸ್ಯರೇ ಸಭೆ ಭಹಿಷ್ಕರಿಸಿ ಹೊರ ನಡೆದರು.

ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಸದಸ್ಯ ಬಿ.ಗಿರೀಶ್ ಮಾತನಾಡಿ, ಬಜೆಟ್ ಸಂಬಂಧ ಕರೆದಿರುವ ಸಭೆಗೆ ಮಾನ್ಯತೆ ಇದೆಯಾ? ನನಗೆ ಇಲ್ಲ ಎಂದು ಅನಿಸುತ್ತಿದೆ. ಪ್ರತಿ ತಿಂಗಳು ಕರೆಯಬೇಕಾದ ಸಭೆಯನ್ನು 5 ತಿಂಗಳು ಕಳೆದರೂ ಏಕೆ ಕರೆದಿರಲಿಲ್ಲ? ಕರೆಯಲು ಅಡಚಣೆ ಏನಿತ್ತು? ಕಾನೂನು ಸಮಸ್ಯೆ ಏನಾದರೂ ಇತ್ತೇ? 30 ದಿನಕ್ಕೊಮ್ಮೆ ಸಭೆ ಕರೆಯಬೇಕೆಂದು ಕಾನೂನಿನಲ್ಲಿ ಇದೆ. ಜತೆಗೆ ಸಭೆಗೂ ಮುನ್ನವೇ 10 ದಿನ ಮುಂಚೆ ಸದಸ್ಯರಿಂದ ಮಾಹಿತಿ ಪಡೆದು 7 ದಿನ ಮುನ್ನವೇ ನೋಟಿಸ್ ನೀಡಬೇಕು ಎಂಬ ನಿಯಮವಿದೆ. ಆದರೆ ಸಭೆಯಲ್ಲಿ ಎರಡು ನಿಮಿಷ ಮಾತನಾಡಿ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.

ಸಿಟ್ಟಿನಿಂದ ಮಧ್ಯ ಪ್ರವೇಶಿಸಿದ ಅಧ್ಯಕ್ಷ ಎ.ಆರ್.ಅಶೋಕ್ ಮಾತನಾಡಿ, ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಎರಡು ತುರ್ತು ಸಭೆ ಕರೆದಾಗ ನೀವು ಬಂದಿರಲಿಲ್ಲ. ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಸಭೆ ಕರೆದಿದ್ದೇವೆ ಎಂದರು.

ಜೆಡಿಎಸ್ ಸದಸ್ಯ ಜಗದೀಶ್ ಮಾತನಾಡಿ, ಬಿ.ಗಿರೀಶ್ ಅವರೇ ಹಿಂದೆ ಅಧ್ಯಕ್ಷರಾಗಿದ್ದವರು. ಅವರಿಗೆ ಎಲ್ಲ ವಿಷಯಗಳು ಗೊತ್ತು. ನೀವು ಅಭಿವೃದ್ಧಿ ಬಗ್ಗೆ ಮಾತನಾಡಿ ಎನ್ನುತ್ತಿದ್ದಂತೆ ನಾಮನಿರ್ದೇಶಿತ ಸದಸ್ಯ ಪರ್ವೀಜ್ ಜಗದೀಶ್ ಅವರ ಮಾತಿಗೆ ಅಕ್ಷೇಪ ವ್ಯಕ್ತಪಡಿಸಿದರು.

ನಾಮನಿರ್ದೇಶಿತ ಸದಸ್ಯರು ವಿನಾ ಕಾರಣ ಪ್ರವೇಶ ಮಾಡಬೇಡಿ, ನೀವು ಸಲಹೆ ನೀಡಬಹುದಷ್ಟೇ ಎಂದು ಅಧ್ಯಕ್ಷ ಎ.ಆರ್.ಅಶೋಕ್ ಹೇಳುತಿದ್ದಂತೆಯೇ ಕಾಂಗ್ರೆಸ್‌ನ ಸದಸ್ಯರಾದ ಜಿ.ಶಾಂತಕುಮಾರ್, ಭರತ್, ಸಿ.ಎನ್.ದಾನಿ, ಮೀನಾಕ್ಷಿ ವೆಂಕಟೇಶ್, ಸಭಾ ಕೌಸರ್, ಬಿ.ಗಿರೀಶ್, ನಾಮನಿರ್ದೇಶಿತ ಸದಸ್ಯ ಪ್ರಸನ್ನ, ಪರ್ವೇಜ್, ವೇದಿಕೆಯಲ್ಲಿದ್ದ ಮುಖ್ಯಾಧಿಕಾರಿಗಳ ಹತ್ತಿರ ಆಗಮಿಸಿ ನಾಮಿನಿ ಸದಸ್ಯರು ಮಾತನಾಡುವ ಆಗಿಲ್ಲವೆ? ಎಂದು ಸಮಜಾಯಿಷಿ ನೀಡುವಂತೆ ಕೇಳಿದರು. ಅಷ್ಟರಲ್ಲಿ ಪುರಸಭೆ ಅಧ್ಯಕ್ಷರ ಬೆಂಬಲಿಗರು ಹಾಗೂ ಮತ್ತೊಂದು ಗುಂಪಿನ ನಡುವೆ ಬಿರುಸಾದ ಮಾತಿನ ಚಕಮಕಿ ನಡೆಯಿತು.

ಕೆಲವರು ಏಕವಚನ ಬಳಸಿದ್ದಲ್ಲದೆ, ಅಧ್ಯಕ್ಷರು ದುಂಡಾವರ್ತನೆ ತೋರುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿ ಸಭೆಯಿಂದ ಹೊರ ನಡೆದರು. ಈ ಸಂದರ್ಭ ಸಭಾಂಗಣದಲ್ಲಿದ್ದ ಅಧಿಕಾರಿ, ನೌಕರರು ಹಾಗೂ ಮಹಿಳಾ ಸದಸ್ಯರು ತುಟಿ ಬಿಚ್ಚದೆ ಮೌನ ವಹಿಸಿದರು.