ಕೆಆರ್‌ಎಸ್ ರಾಜ್ಯ ಕಾರ್ಯದರ್ಶಿ ಎಸ್.ಮಂಜುನಾಥ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶಬರೀಶ್, ಸಮೀರ್ ಇದ್ದರು.  
ನ್ಯೂಸ್

ಬೆಳ್ತಂಗಡಿ-ಧರ್ಮಸ್ಥಳ ಕೆಆರ್‌ಎಸ್ ಪಾದಯಾತ್ರೆ

ಶಿವಮೊಗ್ಗ: ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಆ.26ರಿಂದ ಸೆ.8ರವರೆಗೆ ಬೆಳ್ತಂಗಡಿಯಿಂದ ಬೆಂಗಳೂರು ವಿಧಾನಸೌಧದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಕೆಆರ್‌ಎಸ್(ಕರ್ನಾಟಕ ರಾಷ್ಟ್ರ ಸಮಿತಿ) ಪಕ್ಷದ ರಾಜ್ಯ ಕಾರ್ಯದರ್ಶಿ ಎಸ್.ಮಂಜುನಾಥ್ ತಿಳಿಸಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಆ.26 ರಂದು ಬೆಳ್ತಂಗಡಿಯಿಂದ ಪಾದಯಾತ್ರೆ ಪ್ರಾರಂಭಿಸಲಾಗುವುದು. ಬಳಿಕ ಧರ್ಮಸ್ಥಳಕ್ಕೆ ತೆರಳಿ ಭ್ರಷ್ಟರಿಗೆ ಶಿಕ್ಷೆ ಕೊಡು ಎಂದು ಮಂಜುನಾಥ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಲಾಗುವುದು. ಅಲ್ಲಿಂದ ಉಜಿರೆ, ಮೂಡಿಗೆರೆ, ಹಾಸನ, ಮಂಡ್ಯ, ತುಮಕೂರು, ರಾಮನಗರ ಜಿಲ್ಲೆಗಳ ಮೂಲಕ ಬೆಂಗಳೂರು ತಲುಪಿ ಸೆ.8ರಂದು ವಿಧಾನಸೌಧದಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸೌಜನ್ಯ ಹತ್ಯೆ ಪ್ರಕರಣ ವಿಶೇಷ ಪ್ರಕರಣವೆಂದು ಪರಿಗಣಿಸಿ ಮರು ತನಿಖೆಗೆ ಒಪ್ಪಿಸಬೇಕು. ವಿಶೇಷ ಪೊಲೀಸ್ ತಂಡ ರಚಿಸಬೇಕು. ಈಗಾಗಲೇ ತನಿಖೆ ನಡೆಸಿರುವ ತನಿಖಾಧಿಕಾರಿಗಳನ್ನೂ ತನಿಖೆಗೆ ಒಳಪಡಿಸಬೇಕು. ರಾಜ್ಯದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಶೀಘ್ರ ವಿಲೇವಾರಿಗೆ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಸೌಜನ್ಯ ಮಹಿಳಾ ಸುರಕ್ಷಾ ಆಯೋಗ ಸ್ಥಾಪಿಸಿಬೇಕು ಎಂಬುದು ನಮ್ಮ ಪ್ರಮುಖ ಒತ್ತಾಯವಾಗಿದೆ ಎಂದರು.
ಕೆಆರ್‌ಎಸ್ ಜಿಲ್ಲಾಧ್ಯಕ್ಷ ಎಸ್.ಕೆ.ಪ್ರಭು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬರೀಶ್, ಪ್ರಮುಖರಾದ ಸಮೀರ್ ಸುದ್ದಿಗೋಷ್ಠಿಯಲ್ಲಿದ್ದರು.