ನ್ಯೂಸ್

ಫೆ.12ರಂದು ಅಂಬೆಗಾಲು-5 ಕಿರುಚಿತ್ರ ಸ್ಪರ್ಧೆ

ಶಿವಮೊಗ್ಗ: ಶಿವಮೊಗ್ಗ ಬೆಳ್ಳಿಮಂಡಲ, ಯುಗಧರ್ಮ ಜಾನಪದ ಸಮಿತಿ ಹಾಗೂ ಸಿನಿಮೊಗೆ-ಶಿವಮೊಗ್ಗ ಚಿತ್ರ ಸಮಾಜಗಳ ಆಶ್ರಯದಲ್ಲಿ 5ನೇ ವರ್ಷದ ಅಂಬೆಗಾಲು-5 ಕಿರುಚಿತ್ರ ಸ್ಪರ್ಧೆ ಫೆ.12ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಲಿದೆ ಎಂದು ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಂಚಾಲಕ, ಎಂಎಲ್‌ಸಿ ಡಿ.ಎಸ್.ಅರುಣ್ ತಿಳಿಸಿದರು.

ಅಂದು ಬೆಳಗ್ಗೆ 10.30ಕ್ಕೆ ಆಯ್ದ 14 ಕಿರುಚಿತ್ರಗಳ ಪ್ರದರ್ಶನ ನಡೆಯಲಿದೆ. ಅದೇ ವೇದಿಕೆಯಲ್ಲಿ ಅನ್‌ಲಾಕ್ ರಾಘವ ಚಿತ್ರತಂಡದ ಟೀಸರ್ ಕೂಡ ಬಿಡುಗಡೆ ಆಗಲಿದೆ. ಮಧಾಹ್ನ 12.30ಕ್ಕೆ ಬಹುಮಾನ ವಿತರಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯುವಜನತೆಯಲ್ಲಿ ಚಲನಚಿತ್ರ ಕುರಿತು ಅರಿವು ಮೂಡಿಸುವ ಹಾಗೂ ಅವರಲ್ಲಿನ ಸೃಜನಶೀಲತೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಬಾರಿ 8ರಿಂದ 10 ನಿಮಿಷಗಳ ಈ ಕಿರುಚಿತ್ರ ಸ್ಪರ್ಧೆ ಆಯೋಜಿಸಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ 40 ಕಿರುಚಿತ್ರಗಳು ಸ್ಪರ್ಧೆಯಲ್ಲಿದ್ದವು ಎಂದರು.

ನಾಲ್ಕು ವರ್ಷಗಳ ಅಂಬೆಗಾಲು ಕಿರುಚಿತ್ರ ಸ್ಪರ್ಧೆಗಳಲ್ಲಿ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಕ್ರಿಯಾಶೀಲ ನಿರ್ದೇಶಕರು, ತಂತ್ರಜ್ಞರು ಪಾಲ್ಗೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಈ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪುರಸ್ಕೃತರಾದ ಘನ್ಮಂಡ್ರಿ ಕ್ರಾಸ್, ಹೆಕ್ಕೆಮನೆ, ಚೌಕಿ, ಅನಲಾ, ಕುರ್ಲಿ, ದಾಳಿ, ಭ್ರಾಂತು, ಖೇಜ್, ಕಲಾಂ ಹಿಂದೂಸ್ಥಾನಿ, ಬ್ಲೌಸ್, ನೊಂದವರ ಯುವಕರ ಸಂಘ, ದೂರದರ್ಶನ, ಸೌಮ್ಯ ಮೊದಲಾದ ಪ್ರಶಸ್ತಿ ಪುರಸ್ಕೃತ ಚಿತ್ರಗಳು ರಾಜ್ಯಮಟ್ಟದಲ್ಲಿ ಗಮನ ಸೆಳೆದಿವೆ. ಅಲ್ಲದೆ, ಅನೇಕ ಚಿತ್ರೋತ್ಸವಗಳಲ್ಲಿಯೂ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.

ಸತ್ಯ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಅನ್‌ಲಾಕ್ ರಾಘವ ಚಿತ್ರ ಭಾಗಿ ಆಗಲಿದ್ದು, ನಿರ್ದೇಶಕ ದೀಪಕ್ ಮಧುವನಹಳ್ಳ್ಳಿ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಡಿ. ಸತ್ಯಪ್ರಕಾಶ್, ಚಲನಚಿತ್ರ ಕಲಾವಿದ ನಟರಾಜ ಎಸ್. ಭಟ್, ಮಯೂರ ಮೋಷನ್ಸ್ ಪಿಕ್ಚರ್ಸ್‌ನ ನಿರ್ಮಾಪಕ ಡಿ.ಮಂಜುನಾಥ್, ನಾಯಕ ನಟ ಮಿಲಿಂದ್, ಧರ್ಮ ಕಡೂರು ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸುವರು ಎಂದರು.

ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನ 25 ಸಾವಿರ ರೂ., ದ್ವಿತೀಯ 15 ಸಾವಿರ ರೂ. ಮತ್ತು ತೃತೀಯ ಬಹುಮಾನ 10 ಸಾವಿರ ರೂ. ನೀಡಲಾಗುವುದು. ಜತೆಗೆ ಶ್ರೇಷ್ಠ ನಟ, ನಟಿ, ನಿರ್ದೇಶಕ, ಕಥೆ, ಚಿತ್ರಕಥೆ, ಛಾಯಾಗ್ರಹಣ, ಸಂಗೀತ ವಿಭಾಗದಲ್ಲೂ ಪ್ರಶಸ್ತಿ ಮತ್ತು ಸ್ಮರಣಿಕೆ ನೀಡಲಾಗುವುದು ಎಂದರು. ಪ್ರಮುಖರಾದ ವೈದ್ಯ, ಜಿ.ವಿಜಯಕುಮಾರ್, ಚೇತನ್, ಆನಂದ, ಚಂದ್ರಶೇಖರ್, ಶಿವಾನಂದ್, ಕಿರಣ್, ಮಂಜುನಾಥ್, ರಘುನಂದನ್ ಸುದ್ದಿಗೋಷ್ಠಿಯಲ್ಲಿದ್ದರು.