ಬೆಂಗಳೂರು: ಒಂದು ತಿಂಗಳ ಸುದೀರ್ಘ ರಜೆ ಕೋರಿ ಪೊಲೀಸ್ ಅಧಿಕಾರಿ ಒಬ್ಬರು ತಮ್ಮ ಮೇಲಧಿಕಾರಿಗೆ ಬರೆದ ಪತ್ರಕ್ಕೆ ಸಕಾರಾತ್ಮಕ ಸ್ಪಂದನೆ ದೊರೆಯದಿದ್ದಕ್ಕೆ ಎರಡನೇ ಬಾರಿ ತಮ್ಮ ಮೇಲಧಿಕಾರಿಗಳಿಗೆ ಬರೆದ ಪತ್ರದ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮೊದಲು ಬರೆದಿದ್ದ ಪತ್ರದಲ್ಲಿ ವೈಯಕ್ತಿಕ ಕಾರಣಕ್ಕೆ ರಜೆ ಕೋರುತ್ತಿದ್ದೇನೆ ಎಂದು ಉಲ್ಲೇಖಿಸಿದ್ದ ಪೊಲೀಸ್ ಅಧಿಕಾರಿ, ತಮ್ಮ ಎರಡನೇ ಪತ್ರದಲ್ಲಿ ಆ ವೈಯಕ್ತಿಕ ಕಾರಣ ಏನೆಂದು ವಿವರಿಸಿದ್ದಾರೆ.
ಅಂದಹಾಗೆ ಈ ಪತ್ರವನ್ನು ಬಳ್ಳಾರಿ ತೋರಣಗಲ್ಲು ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕರು ಬಳ್ಳಾರಿಯ ಪೊಲೀಸ್ ಅಧೀಕ್ಷಕರಿಗೆ ಬರೆದಿದ್ದಾರೆ.
ಪೊಲೀಸ್ ಅಧಿಕಾರಿ ಬರೆದ ಪತ್ರದ ಸಾರಾಂಶ ಈ ಕೆಳಕಂಡಂತಿದೆ...
ಉಲ್ಲೇಖ-1 ರ ಪ್ರಕಾರ ನನಗೆ 30 ದಿನಗಳ ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದನು. ಉಲ್ಲೇಖ-2 ರ ಪ್ರಕಾರ ನೀವು 5 ದಿನಗಳ ಪರಿವರ್ತಿತ ರಜೆಯನ್ನು ಮಾತ್ರ ಮಂಜೂರು ಮಾಡಿದ್ದು, ಉಳಿದ 25 ದಿನಗಳ ರಜೆ ಮಂಜೂರು ಮಾಡಲು ತಮಗಿದ್ದ ತೊಂದರೆ, ತೊಡಕು, ಅಸಹಾಯಕತೆ ಅಥವಾ ಅನಿವಾರ್ಯತೆ ಬಗ್ಗೆ ತಿಳಿಸದೇ ಇರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ನೀವು ಕಣ್ತಪ್ಪಿನಿಂದ 5 ದಿನ ಪರಿವರ್ತಿತ ರಜೆ ಮಂಜೂರು ಮಾಡಿದ್ದೀರೋ ಅಥವಾ ಉದ್ದೇಶಪೂರ್ವಕವಾಗಿಯೇ ರಜೆಯನ್ನು ತಡೆ ಹಿಡಿದಿದ್ದೀರೋ ಅಥವಾ ನನ್ನ ಖಾತೆಯಲ್ಲಿ ರಜೆ ಇಲ್ಲವೋ, ಇದ್ಯಾವುದನ್ನು ಸ್ಪಷ್ಟವಾಗಿ ನಮೂದಿಸದೇ ಮತ್ತೊಮ್ಮೆ ತಾವು ತಮ್ಮ ನಿರ್ಲಕ್ಷ್ಯ ಆಡಳಿತದ ವೈಖರಿಯನ್ನು ಪ್ರದರ್ಶಿಸಿದ್ದೀರಿ ಎಂದು ನನಗೆ ಅನ್ನಿಸುತ್ತಿದೆ.
ನಾನು ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದು, ಆ ಕಾರಣಗಳನ್ನು ವಿವರಿಸುವ ಅವಶ್ಯಕತೆ ಮತ್ತು ಅನಿವಾರ್ಯತೆ ಇಲ್ಲವೆಂದು ಈ ಮೊದಲು ಭಾವಿಸಿದ್ದೆನು. ಆದರೆ ಈಗ ಆ ಕಾರಣಗಳನ್ನು ತಿಳಿಸುವ ಅನಿವಾರ್ಯತೆಯನ್ನು ತಾವು ಸೃಷ್ಟಿಸಿದ್ದೀರಿ, ನಿಮ್ಮ ಆಡಳಿತವು ತಾರತಮ್ಯ, ಕಿರುಕುಳ, ಸುಳ್ಳು, ಮೋಸದಿಂದ ಕೂಡಿದ್ದು, ನೀವು ನನ್ನ ಮಾನಸಿಕ ನೆಮ್ಮದಿಯನ್ನು ಸತತವಾಗಿ ಕದಡುತ್ತಾ ಬಂದಿದ್ದೀರಿ, ನಿಮ್ಮ ಈ ರೀತಿಯ ವರ್ತನೆಯು ಹೀಗೆ ಮುಂದುವರೆದು, ನಿಮ್ಮ ಆಧೀನದಲ್ಲಿ ಇದೇ ಪರಿಸ್ಥಿತಿಯಲ್ಲಿ ನಾನು ಕೆಲಸ ಮುಂದುವರೆಸಿದಲ್ಲಿ, ನನಗೆ ಮಾನಸಿಕ ಕ್ಷೋಬೆ ಅಥವಾ ಖಿನ್ನತೆಗೆ ಒಳಗಾಗುವ ಸಂಭವ ಇರುವುದರಿಂದ ಕೆಲಕಾಲಮಟ್ಟಿಗಾದರೂ ನಿಮ್ಮ ಕಿರುಕುಳದಿಂದ ದೂರವಾಗಿ ಮನಸ್ಸಿಗೆ ಶಾಂತಿ ಸಧೃಡತೆ ಪಡೆಯುವ ಉದ್ದೇಶಕ್ಕಾಗಿ ನನಗೆ ಯೋಗ, ಧ್ಯಾನ, ಪ್ರಾರ್ಥನೆಯಂತಹ ನಮ್ಮ ಸಂಸ್ಕೃತಿಯ ಸಂಸ್ಕಾರಗಳನ್ನು ರೂಢಿಸಿಕೊಳ್ಳಲು ಅವಶ್ಯಕತೆ ಇರುವುದರಿಂದ 30 ದಿನಗಳ ರಜೆ ಕೋರಿದ್ದೆನು.
ಸಂಘರ್ಷಕ್ಕೆ ಆಸ್ಪದವಿಲ್ಲದಂತೆ ಮತ್ತು ನಿಮ್ಮ ಕಿರುಕುಳವನ್ನು ನಿಭಾಯಿಸಿ, ಸಾರ್ವಜನಿಕರಿಗೆ ಅನ್ಯಾಯವಾಗದಂತೆ ನನ್ನ ಮಾನಸಿಕ ಸ್ಥಿತಿಯನ್ನು ಸ್ಥಿಮಿತದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಲು ನನಗೆ ಯೋಗ, ಧ್ಯಾನ, ಪ್ರಾರ್ಥನೆಯಂತಹ ಮಾರ್ಗೋಪಾಯಗಳ ಅವಶ್ಯಕತೆ ಇರುತ್ತದೆ. ಆದ್ದರಿಂದ ತಾವು ನನ್ನ ಖಾತೆಯಲ್ಲಿದ್ದ 30 ದಿನಗಳ ರಜೆಯನ್ನು ಮಂಜೂರು ಮಾಡಲು ಮತ್ತೊಮ್ಮೆ ಕೋರುತ್ತೇನೆ. ಒಂದು ವೇಳೆ ನೀವು ರಜೆ ಮಂಜೂರು ಮಾಡದೇ 5 ದಿನಕ್ಕೆ ಹಿಂದಿರುಗಿ ಬಂದು ಕೆಲಸ ಮಾಡಬೇಕು ಎಂಬ ಆಶಯ ಮತ್ತು ಉದ್ದೇಶ ನಿಮ್ಮದಾಗಿದ್ದರೆ, ಈ ಪತ್ರ ತಲುಪಿದ 3 ದಿನಗಳ ಒಳಗಾಗಿ ತಾವು ನನಗೆ ಜ್ಞಾಪನ ನೀಡಲು ಕೋರಲಾಗಿದೆ.
ಒತ್ತಡದ ಪರಿಸ್ಥಿತಿಯಲ್ಲಿಯೂ ನಾನು ಕರ್ತವ್ಯ ಮಾಡುವುದು ಅನಿವಾರ್ಯವಾಗಿದ್ದಲ್ಲಿ ನನ್ನ ಒತ್ತಡ ನಿಭಾಯಿಸುವಿಕೆಯು ಮಿತಿ ಮೀರಿಹೋದಲ್ಲಿ ಅದರಿಂದ ಮುಂದೆ ಸಾರ್ವಜನಿಕರಿಗಾಗಲಿ ಅಥವಾ ಅಧೀನ ಸಿಬ್ಬಂದಿಗಾಗಲಿ ಅಥವಾ ನಿಮ್ಮೊಂದಿಗಾಗಲಿ, ಅವಘಡಗಳು, ಅಚಾತುರ್ಯಗಳು ನಡೆದಲ್ಲಿ ತಮ್ಮದೇ ಜವಾಬ್ದಾರಿ ಎಂದು ಭಾವಿಸಿ ಎಲ್ಲ ಜವಬ್ದಾರಿಗಳನ್ನು ತಾವು ಹೊತ್ತುಕೊಂಡಿದ್ದಲ್ಲಿ ನಾನು ನಿಮ್ಮ ಒತ್ತಡದ ನಡುವೆಯೂ ಕೆಲಸ ಮಾಡಬಲ್ಲೆ, ಯಾವುದೇ ಅಚಾತುರ್ಯಕ್ಕೆ ಅವಘಡಗಳಿಗೆ ನಾನು ಹೊಣೆಗಾರನಾಗಲಾರೆ. ಆದ್ದರಿಂದ ತಮ್ಮ ನಿರ್ಧಾರವನ್ನು ಜೂನ್ 22 ರ ಒಳಗೆ ತಿಳಿಸಿದಲ್ಲಿ ಆ ಪ್ರಕಾರ ಕರ್ತವ್ಯಕ್ಕೆ ಬರುತ್ತೇನೆ. ಇಲ್ಲವಾದಲ್ಲಿ ನಾನು ಜೂ. 19ರಿಂದ ರಜೆಯ ಮೇಲೆ ತೆರಳುತ್ತಿದ್ದು, ನನ್ನ ಉಲ್ಲೇಖಿತ-1 ರ ಮನವಿಯಂತೆ ನನಗೆ 30 ದಿನಗಳ ರಜೆ ಮಂಜೂರು ಮಾಡುತ್ತೀರಿ ಎಂಬ ನಂಬಿಕೆಯ ಮೇಲೆ ಹೊರಡುತ್ತಿದ್ದೇನೆ.
ಒಂದು ತಿಂಗಳ ನಂತರ ಸದೃಢ ಮನಸ್ಸಿನೊಂದಿಗೆ ನಿಮ್ಮ ಒತ್ತಡ, ಕಿರುಕುಳವನ್ನು ನಿಭಾಯಿಸುವ ಶಾಂತಿ ಮಂತ್ರವನ್ನು ಕಲಿತು ಬರುವ ವಿಶ್ವಾಸದಲ್ಲಿದೇನೆ. ಇದನೆಲ್ಲೆ ಕಲಿತರೂ ಮತ್ತೊಮ್ಮೆ ಕಷ್ಟವಾದಲ್ಲಿ ಮುಂದಿನ ಕಾರ್ಯಕ್ರಮ ಕಾಲಾಯ ತಸ್ಮೈ ನಮಃ ಎಂದು ಪತ್ರವನ್ನು ಬರೆದಿದ್ದಾರೆ.
ಇದೀಗ ಈ ಪತ್ರ ಭಾರೀ ವೈರಲ್ ಆಗಿದ್ದು, ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.