ನ್ಯೂಸ್

ಬೆಳ್ಳಂದೂರು, ಈಜಿಪುರ, ಆಗರಂ ಭಾಗದ ಸಂಚಾರ ದಟ್ಟಣೆಗೆ ಮುಕ್ತಿ; ಬಿಬಿಎಂಪಿಗೆ ಭೂಮಿ ನೀಡಲು ರಕ್ಷಣಾ ಇಲಾಖೆ ಒಪ್ಪಿಗೆ: ಡಿಕೆಶಿ

Bengaluru - Political - Shivananda Tagadur

ಬೆಂಗಳೂರು:
ಲೋವರ್ ಆಗರಂ ನಿಂದ ಸರ್ಜಾಪುರವರೆಗೂ ರಸ್ತೆ ಆಗಲೀಕರಣಕ್ಕೆ 12.34 ಎಕರೆ ಜಮೀನನ್ನು ರಕ್ಷಣಾ ಇಲಾಖೆ ಬಿಬಿಎಂಪಿಗೆ ನೀಡಿದ್ದು, ಇನ್ನೂ 10.77 ಎಕರೆ ನೀಡಲು ತಾತ್ವಿಕ ಒಪ್ಪಿಗೆ ಕೊಟ್ಟಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಎಎಸ್‌ಸಿ ಸೆಂಟರ್ ಮತ್ತು ಕಾಲೇಜಿನ ಕಮಾಂಡೆಂಟ್ ಲೆಫ್ಟನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರ ಜತೆ ವಿಧಾನಸೌಧದಲ್ಲಿ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದರು.
ಎಂ.ಜಿ.ರಸ್ತೆಯಿಂದ ಬೆಳ್ಳಂದೂರು ಭಾಗಕ್ಕೆ ತೆರಳಲು ಸುಮಾರು 1 ಗಂಟೆ ಸಮಯ ಬೇಕಾಗಿತ್ತು. ಈ ರಸ್ತೆ ನಿರ್ಮಾಣವಾದ ನಂತರ 5 ರಿಂದ 8 ನಿಮಿಷಗಳ ಅಂತರದಲ್ಲಿ ಕ್ರಮಿಸಬಹುದು ಎಂದರು.
ನಾನು ಹಾಗೂ ಮುಖ್ಯಮಂತ್ರಿಗಳು ಕೇಂದ್ರ ರಕ್ಷಣಾ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆವು. ನಮ್ಮ ಮನವಿಗೆ ಕೇಂದ್ರ ರಕ್ಷಣಾ ಸಚಿವಾಲಯ ಸ್ಪಂದಿಸಿ, ಒಟ್ಟು 22 ಎಕರೆ ಜಾಗವನ್ನು ರಸ್ತೆಗಾಗಿ ಬಿಟ್ಟುಕೊಡಲು ತೀರ್ಮಾನಿಸಿ ಸಹಕಾರ ನೀಡಿದೆ ಎಂದರು.
ಈ ರಸ್ತೆ ನಿರ್ಮಾಣದ ಮೊದಲ ಹಂತದ 3.50 ಕಿ.ಮೀ ಕಾಮಗಾರಿಗೆ 35 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. ಟ್ರಿನಿಟಿ ಸರ್ಕಲ್, ಈಜಿಪುರ ಸೇರಿದಂತೆ ಒಂದಷ್ಟು ಕಡೆ ನೂತನ ರಸ್ತೆ ನಿರ್ಮಾಣಕ್ಕೆ ಇನ್ನು 10.77 ಎಕರೆ ಜಾಗವನ್ನು ರಕ್ಷಣಾ ಇಲಾಖೆ ನೀಡಬೇಕಿದೆ. ಇದರಿಂದ ಐಟಿ ಹಬ್ ಗೆ ತೆರಳಲು ಇದ್ದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ರಕ್ಷಣಾ ಇಲಾಖೆ 12.34 ಎಕರೆ ಜಾಗವನ್ನು ಬಿಬಿಎಂಪಿಗೆ ಹಸ್ತಾಂತರಿಸಿದ್ದಾರೆ. ಇದಕ್ಕಾಗಿ ನಮಗೆ ಸಹಕಾರ ಕೊಟ್ಟ ಲೆಫ್ಟನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರು ಇದೇ 30 ರಂದು ನಿವೃತ್ತಿಯಾಗುತ್ತಿದ್ದು, ಅವರನ್ನು ನಮ್ಮ ಕಚೇರಿಗೆ ಆಹ್ವಾನಿಸಿ ಅಭಿನಂದಿಸಿದ್ದೇವೆ ಎಂದರು.
ಐಟಿ ಹಬ್ ಗೆ ತೆರಳುವವರಿಗೆ ಹಾಗೂ ಪೂರ್ವ ಬೆಂಗಳೂರಿಗರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ನಾನು ಬೆಂಗಳೂರು ನಗರಭಿವೃದ್ಧಿ ಇಲಾಖೆಯ ಜವಾಬ್ದಾರಿ ತೆಗೆದುಕೊಂಡ ನಂತರ ಬೆಳ್ಳಂದೂರು ಹಾಗೂ ಸುತ್ತಮುತ್ತಲ ಐಟಿ ಹಬ್ ಭಾಗದ ಜನರ ಸಮಸ್ಯೆ ಆಲಿಸಿದ್ದೆ. ಅಲ್ಲಿನ ಸಂಚಾರ ದಟ್ಟಣೆ ವಿಚಾರವಾಗಿ ದಿನನಿತ್ಯ ಎಂಟತ್ತು ಇ-ಮೇಲ್ಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆವು. ಈ ಸಮಸ್ಯೆಗೆ ಈಗ ಪರಿಹಾರ ಸಿಕ್ಕಿದಂತಾಗಿದೆ ಎಂದರು.
ಹೆಬ್ಬಾಳದ ಬಳಿಯ ಹೋಪ್ ಡೈರಿ ಫಾರ್ಮ್ ಬಳಿ ಟನಲ್ ರಸ್ತೆಯ ಪ್ರವೇಶಕ್ಕೆ ಜಾಗ ಅಗತ್ಯವಿದೆ. ಇದಕ್ಕೆ ಎರಡು ಎಕರೆ ಜಾಗ ಬಿಟ್ಟುಕೊಡಬೇಕು ಎಂಬ ಪ್ರಸ್ತಾವನೆ ನೀಡಲಿದ್ದೇವೆ ಎಂದು ಹೇಳಿದರು.
ಈ ಜಾಗಗಳನ್ನು ರಕ್ಷಣಾ ಇಲಾಖೆಯಿಂದ ಪಡೆಯಲು ಸತತ ಪ್ರಯತ್ನ ಮಾಡಿದ್ದೇನೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಕ್ಷಣಾ ಸಚಿವರು ಹಾಗೂ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು ಎಂದರು.
ರಕ್ಷಣಾ ಇಲಾಖೆಯು ಭೂಮಿಗೆ ಪರ್ಯಾಯವಾಗಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಂತೆ ಕೇಳಿದ್ದು, ನಾವು ಅದನ್ನು ಮಾಡುತ್ತೇವೆ ಎಂದರು.

ಚಿತ್ರ ಶೀರ್ಷಿಕೆ:
ಬೆಂಗಳೂರಿನ ಎಎಸ್‌ಸಿ ಸೆಂಟರ್ ಮತ್ತು ಕಾಲೇಜಿನ ಕಮಾಂಡೆಂಟ್ ಲೆಫ್ಟನೆಂಟ್ ಜನರಲ್ ಬಸಂತ್ ಕುಮಾರ್ ರೆಪ್ಸ್ವಾಲ್ ಅವರು ಡಿಸಿಎಂ ಡಿ. ಕೆ. ಶಿವಕುಮಾರ್ ಅವರನ್ನು ವಿಧಾನಸೌಧದಲ್ಲಿ ಶನಿವಾರ ಭೇಟಿ ಮಾಡಿ, ಮಾತುಕತೆ ನಡೆಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಉಪಸ್ಥಿತರಿದ್ದರು.