ನ್ಯೂಸ್

ಹಲೋ ಡಾಕ್ಟರ್​: ನಂಬಿಕೆ ವಿಶ್ವಾಸಗಳೇ ಆರೋಗ್ಯಕರ ಬಾಳಿನ ಜೀವಾಳ

‘ನಂಬಿ ಕೆಟ್ಟವರಿಲ್ಲ’ ಎಂಬ ಮಾತು ನಮ್ಮ ಸಮಾಜದಲ್ಲಿ ಪ್ರಚಲಿತವಾಗಿದೆ. ಈ ಮಾತು ಆಯಾ ಸಂದರ್ಭ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಇರುತ್ತದೆ ಎಂಬುದು ನಿಜ. ‘ನಂಬಿಕೆ’ ಮತ್ತು ‘ವಿಶ್ವಾಸ’ ಇವು ಮನುಷ್ಯಜೀವನದಲ್ಲಿ ಎರಡು ಮಹತ್ತರ ಪಾತ್ರ ವಹಿಸಬಲ್ಲ ಶಬ್ದಗಳು ಮತ್ತು ಜೀವನಕ್ರಮಗಳು.

ದೇವರನ್ನು ಕಣ್ಣಾರೆ ಕಂಡವರು ಯಾರೂ ಇಲ್ಲ. ಆದರೆ ಅವನ ಮೇಲೆ ನಂಬಿಕೆ ಮತ್ತು ವಿಶ್ವಾಸ ಮಾತ್ರ ಅಪಾರ. ನಮ್ಮ ಸಂಕಷ್ಟ ಪರಿಹರಿಸುವನೆಂಬ ಅತಿಯಾದ ವಿಶ್ವಾಸ ಮತ್ತು ನಮ್ಮ ನಮ್ಮ ಕೆಲಸಗಳಲ್ಲಿ ಯಶಸ್ಸು ಸಿಕ್ಕಿಯೇ ಸಿಗುತ್ತದೆ ಎನ್ನುವ ನಂಬಿಕೆ ಮನುಷ್ಯನ ಜೀವನಕ್ಕೆ ಸ್ಪೂರ್ತಿಯ ಸೆಲೆಯಾಗಿದೆ. ಕೋಟ್ಯಂತರ ಜನ ಇಂದಿಗೂ ಬದುಕುತ್ತಿರುವುದು ನಂಬಿಕೆ ಮತ್ತು ವಿಶ್ವಾಸದ ಮೇಲೆಯೇ. ಸಾಗರದಷ್ಟು ಸಂಕಷ್ಟಗಳ ನಡುವೆಯೂ ಸುಖ ಮತ್ತು ಯಶಸ್ಸನ್ನು ಕೊಡುವುದು ಈ ನಂಬಿಕೆಯೇ. ಎಲ್ಲೋ ಒಂದು ಕಡೆ ಈ ನಂಬಿಕೆ ಹುಸಿಯಾದಾಗ ನೇರ ಪರಿಣಾಮ ಆಗುವುದು ಮನಸ್ಸಿನ ಮೇಲೆ. ಮನಸ್ಸು ವಿಚಲಿತ ಅಥವಾ ಘಾಸಿಗೊಂಡರೆ ಇಡೀ ಜೀವನ ಕ್ರಮ ಮತ್ತು ಮಾನಸಿಕ ಅಸ್ವಸ್ಥತೆ ಖಚಿತ.

ಇನ್ನು ನಮ್ಮ ಹಿರಿಯರು ಅದೆಷ್ಟೋ ಸಲ ನಮಗೆಲ್ಲ ತಿಳಿಹೇಳುತ್ತಿರುತ್ತಾರೆ ನೋಡಿ, ‘ಜೀವನದಲ್ಲಿ ನಂಬಿಕೆ ಕಳೆದುಕೊಳ್ಳಬೇಡಿ. ಒಂದು ಸಲ ಅದನ್ನು ಕಳೆದುಕೊಂಡರೆ ಮುಗೀತು, ಮತ್ತೆ ಅದನ್ನು ಗಳಿಸೋದು ಕಷ್ಟ’ ಅಂತ. ಇದು ಸುಮ್ಮಸುಮ್ಮನೆ ಹೇಳಿದ ಮಾತಲ್ಲ. ಅನುಭವಜನ್ಯ ಮತ್ತು ವಾಸ್ತವ ಮಾತು. ನಮ್ಮ ನಮ್ಮ ಸಾಮರ್ಥ್ಯದ ಮೇಲೆ ಅಥವಾ ನಾವು ನಂಬುವ, ಆರಾಧಿಸುವ ದೇವರ ಮೇಲಿರಬಹುದು ಈ ನಂಬಿಕೆ ಮತ್ತು ವಿಶ್ವಾಸ ಉತ್ತಮ ಜೀವನಕ್ಕೆ ಭದ್ರ ಬುನಾದಿ ಎಂತಲೇ ಹೇಳಬಹುದು. ಇನ್ನು ವಿದ್ಯಾರ್ಥಿಗಳಿಗೆ, ಯುವ ಸಮುದಾಯಕ್ಕೆ ಯಾವುದೇ ಒಂದು ವಿಷಯದ ಅರಿವು ಹೊಂದಲು ನಂಬಿಕೆ ಮುಖ್ಯ. ಜ್ಞಾನದ ತಳಹದಿಯ ಮೇಲೆ ನಂಬಿಕೆಯ ಸತ್ಯಶೋಧನೆ ಮಾಡಿದಾಗ ಯಶಸ್ಸು ಸಿಗುತ್ತದೆ. ಅದೇ ರೀತಿ ಯಾವುದನ್ನೂ ನಂಬುವ ಮೊದಲು ಪರಾಮಶಿಸಿ ಅನುಭವದ ಮೂಲಕ ದೃಢಪಡಿಸಿಕೊಳ್ಳಬೇಕು. ವ್ಯಕ್ತಿತ್ವ ಎಂಬುದು ಅನೇಕ ಶಕ್ತಿಗಳ ಸಂಗಮ. ವ್ಯಕ್ತಿಗೆ ಆದರ್ಶ, ಸದಾಚಾರ, ಶಿಸ್ತು ಮುಖ್ಯ. ಇವು ರೂಢಿಗತವಾಗುವುದು ನಂಬಿಕೆ ಮತ್ತು ವಿಶ್ವಾಸದಿಂದ. ಈ ಎರಡು ಅಂಶಗಳ ಮೂಲಕ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಶಿಲ್ಪಿ ಆ ವ್ಯಕ್ತಿಯೇ ಆಗಿರುತ್ತಾನೆ. ಏಕೆಂದರೆ ಮನಸ್ಸು ವ್ಯಕ್ತಿತ್ವದ ಪ್ರತಿನಿಧಿಯಾಗಿರುತ್ತದೆ. ಮನಸ್ಸು ಪರಿಶುದ್ಧವಾಗಿರಬೇಕು. ಅದಕ್ಕೆ ಹೇಳೋದು ಮನಸ್ಸಿದ್ದರೆ ಮಹದೇವ ಎಂದು. ಶುದ್ಧ ಮನಸ್ಸಿಗೆ ಅಗತ್ಯವಿರುವುದು ಒಳ್ಳೆಯ ಆಚಾರ-ವಿಚಾರಗಳ ಮೇಲೆ ನಂಬಿಕೆ. ಮನುಷ್ಯನ ಮನಸ್ಸಿಗೆ ಸರಿ-ತಪ್ಪುಗಳ ಮಾರ್ಗವನ್ನು ತೋರಿಸುವುದು ಈ ನಂಬಿಕೆ ಮತ್ತು ವಿಶ್ವಾಸದ ಕೆಲಸ. ಇವೆರಡು ಮನುಷ್ಯನಿಗೆ ಮನುಷ್ಯ ಕೊಡುವ ಅತೀ ದೊಡ್ಡ ಉಡುಗೊರೆ. ಇವುಗಳನ್ನು ಬೆಳೆಸಿಕೊಳ್ಳುವುದು ಎಲ್ಲರ ಕರ್ತವ್ಯ.

ಮನಸ್ಸು ಕೆರಳಬಾರದು, ಅರಳಬೇಕು. ಸುಖ-ದುಃಖದಲ್ಲೂ ಸಮತೋಲನ ಕಾಪಾಡಿಕೊಂಡು ವಿಶ್ವವನ್ನೇ ಗೆಲ್ಲಬಲ್ಲೆ ಎನ್ನುವ ವಿಶ್ವಾಸ ಪ್ರತಿಯೊಬ್ಬರಲ್ಲೂ ಮೂಡಬೇಕು. ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ |’ ಅಂದರೆ, ಮನುಷ್ಯ ಅಪೇಕ್ಷಿಸುವ ಬೇಕು-ಬೇಡಗಳಿಗೆ ಮನಸ್ಸೇ ಕಾರಣ. ಈ ದಿಸೆಯಲ್ಲಿ ವಿಶ್ವಾಸ ಹಾಗೂ ನಂಬಿಕೆ ಪ್ರತಿಯೊಬ್ಬರ ಜೀವನದಲ್ಲಿ ಪೂರಕವಾದ ಸಂಬಂಧಗಳನ್ನು ರೂಪಿಸುತ್ತವೆ. ಇವುಗಳಿಗೆ ಚ್ಯುತಿಯಾದಾಗ ಅನೇಕ ಮಾನಸಿಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇದೊಂದು ಮನೋ ಸಮಸ್ಯೆ ಎಂದು ಅರಿಯದೆ ಜನ ಸಮಸ್ಯೆಗೆ ಸಿಲುಕುತ್ತಾರೆ. ಆರೋಗ್ಯಕರ ಬದುಕಿಗೆ ವಿಶ್ವಾಸವೇ ಜೀವಾಳ.