ನ್ಯೂಸ್

ಬೆಳಗಾವಿಯಲ್ಲಿ ಎಪಿಇಡಿಎ ಸ್ಥಾಪನೆಗೆ ಒತ್ತಾಯ

ಬೆಳಗಾವಿ: ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗಾವಿ ವಿಮಾನ ನಿಲ್ದಾಣದ ಬಳಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಪ್ತ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಸ್ಥಾಪಿಸಬೇಕೆಂದು ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ಗೆ ಸಂಸದ ಜಗದೀಶ ಶೆಟ್ಟರ್ ಮಂಗಳವಾರ ಮನವಿ ಸಲ್ಲಿಸಿದರು.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ಅವರನ್ನು ಭೇಟಿ ಮಾಡಿ ರೈತರಿಗೆ ಅನಕೂಲವಾಗಲು ಹಾಗೂ ಅವರ ಉತ್ಪನ್ನವನ್ನು ಹೆಚ್ಚಿಸಲು ಬೆಳಗಾವಿ ವಿಮಾನ ನಿಲ್ದಾಣ ಹತ್ತಿರದಲ್ಲಿ ಹಣ್ಣು ಮತ್ತು ತರಕಾರಿ ಹೆಚ್ಚು ದಿನಗಳವರೆಗೆ ಗುಣಮಟ್ಟ ಕಾಯ್ದುಕೊಳ್ಳಲು ಶೀಥಲ ಶೇಖರಣೆ ಘಟಕ, ಪ್ಯಾಕೇಜಿಂಗ್ ಸೌಕರ್ಯ ಒದಗಿಸಲು ಪ್ರಾಧಿಕಾರ ಸ್ಥಾಪನೆಯಾಗಬೇಕೆಂಬ ರೈತರ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.

ದೇಶದ ಶೇ.18ರಷ್ಟು ಹಣ್ಣು ಮತ್ತು ತರಕಾರಿ ಬೆಳೆ, ಸೂಕ್ತವಾದ ಶೀಥಲ ಶೇಖರಣೆ ಸೌಕರ್ಯವಿಲ್ಲದೆ ಅನಗತ್ಯವಾಗಿ ನಷ್ಟವಾಗುತ್ತಿದೆ. ಹೀಗಾಗಿ, ರೈತರು ಆರ್ಥಿಕವಾಗಿ ದುರ್ಬಲವಾಗುತ್ತಿದ್ದಾರೆ. ಅಂದಾಜು 13,300 ಕೋಟಿ ರೂ. ಹಣ ನಷ್ಟವಾಗುತ್ತಿದೆ. ಇದನ್ನು ತಡೆಗಟ್ಟಲು ರೈತರು ಬೆಳೆದ ಹಣ್ಣು ಮತ್ತು ತರಕಾರಿ ಬೆಳೆಗಳ ಗುಣಮಟ್ಟ ಕಾಪಾಡುವುದು ಅಗತ್ಯವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಹಣ್ಣು ಮತ್ತು ತರಕಾರಿ ಬೆಳೆಯುತ್ತಿದ್ದು, ದೇಶ, ವಿದೇಶಗಳಿಗೆ ರಪ್ತು ಮಾಡಲಾಗುತ್ತಿದೆ.

ಈಗಾಗಲೇ ಗೋವಾ ರಾಜ್ಯದ ಮಾಪ್ಸಾ ಪಟ್ಟಣದ ಬಳಿ ಸ್ಥಾಪನೆಯಾಗುತ್ತಿರುವ ಮಾದರಿಯಲ್ಲಿಯಂತೆ ಬೆಳಗಾವಿ ವಿಮಾನ ನಿಲ್ದಾಣದ ಬಳಿ ಎಪಿಇಡಿಎ ಸ್ಥಾಪಿಸುವುದು ಅವಶ್ಯಕ ಎಂದು ಸಚಿವರಿಗೆ ಮನವರಿಕೆ ಮಾಡಿದರು.

ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಮುಂಬರುವ ದಿನಗಳಲ್ಲಿ ಅಗತ್ಯವಾಗಿ ಪರಿಗಣಿಸಿ, ರೈತರಿಗೆ ಅನುಕೂಲ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಜಗದೀಶ ಶೆಟ್ಟರ್ ತಿಳಿಸಿದ್ದಾರೆ.