ನ್ಯೂಸ್

ನೀರು ನಿಲ್ಲದ ಅಣೆಕಟ್ಟು ! ಬೆಳಂಜೆಯಲ್ಲಿ ರೈತರ ಆಕ್ರೋಶ ಅಧಿಕಾರಿಗಳಿಂದ ನಿರ್ಲಕ್ಷ್ಯದ ಆರೋಪ

ಹೆಬ್ರಿ: ಕುಚ್ಚೂರು ಗ್ರಾಪಂ ವ್ಯಾಪ್ತಿಯ ಬೆಳಂಜೆ ಸಮೀಪದ ಕೆಳಬಾದ್ಲು ಎಂಬಲ್ಲಿ ಸಣ್ಣ ನೀರಾವರಿ ಇಲಾಖೆ ಯೋಜನೆಯಲ್ಲಿ ನಿರ್ಮಿಸಿದ ಕಿಂಡಿ ಅಣೆಕಟ್ಟು ಅತ್ಯಂತ ಕಳಪೆ ಮಟ್ಟದಿಂದ ಕೂಡಿದ್ದು, ಉಪಯೋಗಕ್ಕಿಲ್ಲದಂತಾಗಿದೆ ಎಂದು ಸ್ಥಳೀಯ ಕೃಷಿಕರು ಆರೋಪಿಸಿದ್ದಾರೆ.

ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದ್ದು, 89 ಅಡಿ ಉದ್ದ 33 ಕಿಂಡಿಗಳಲ್ಲಿ ನೀರು ಸಂಗ್ರಹವಾಗಲು ಹಲಗೆ ಹಾಕಲಾಗಿದ್ದು, ಇವೆಲ್ಲವೂ ಅತ್ಯಂತ ಕಳಪೆ ಮಟ್ಟದ್ದಾಗಿದೆ. ಕಳೆದ ವರ್ಷವೂ ಇದೇ ಸಮಸ್ಯೆ ಎದುರಿಸಿ ಹೊಸ ಹಲಗೆ ಹಾಕಲು ಸಾರ್ವಜನಿಕರು ಒತ್ತಾಯಿಸಿದ್ದರು. ಆದರೆ ಈ ವರ್ಷವೂ ಕಳಪೆ ಮಟ್ಟದ ಹಲಗೆ ಅಳವಡಿಸಿದ್ದಾರೆ. ಇದು ಕೇವಲ ಹಲಗೆಯ ಸಮಸ್ಯೆಯಲ್ಲದ ತಳಪಾಯದಲ್ಲಿ ಹಾಕಿದ್ದ ಬೆಡ್ ಕೂಡ ಸರಿಯಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಕೃಷಿಯನ್ನು ಪೋಷಿಸುವ ಉದ್ದೇಶದಿಂದ ಅಣೆಕಟ್ಟು ನಿರ್ಮಾಣವಾಗಿದ್ದು, ಕಳಪೆ ಕಾಮಗಾರಿಯಿಂದ ನೀರಿನ ಸಂಗ್ರಹವಾಗುತ್ತಿಲ್ಲ. ಇದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಹಾಗೂ ಅಣೆಕಟ್ಟಿನ ಎರಡು ಬದಿಯಲ್ಲಿ ಖಾಸಗಿ ಜಮೀನಿದ್ದು, ಯಾವುದೇ ಸಂಪರ್ಕ ರಸ್ತೆ ಹೊಂದಿಲ್ಲ. ಇಲ್ಲಿಗೆ ತೆರಳಬೇಕಾದರೆ ಖಾಸಗಿ ಜಮೀನಿನ ಮೂಲಕ ಪ್ರವೇಶ ಮಾಡಬೇಕು.

ಸೂಚಿಸಿದ ಸ್ಥಳದಲ್ಲಿ ಅಣೆಕಟ್ಟನ್ನು ನಿರ್ಮಿಸದೆ ಯಾರದೋ ಅನುಕೂಲಕ್ಕಾಗಿ ಸಾರ್ವಜನಿಕರ ಹಿತಾಸಕ್ತಿ ಕಡೆಗಣಿಸಿ ಈ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಂಡಿ ಅಣೆಕಟ್ಟಿನ ಅಂಚಿನಲ್ಲಿ ಹಾಕಿದ್ದ ಕಬ್ಬಿಣದ ಸರಳುಗಳು ಹೊರಮುಖವಾಗಿವೆ. ಈ ಸರಳುಗಳು ತುಕ್ಕು ಹಿಡಿದಿದ್ದು, ಮುಂದೆ ಅಣೆಕಟ್ಟಿಗೆ ಅಪಾಯ ತಂದೊಡ್ಡಬಲ್ಲದು. ಅಣೆಕಟ್ಟಿನ ಎರಡು ಬದಿಯಲ್ಲಿ ಮಣ್ಣು ಭರ್ತಿ ಮಾಡಿಲ್ಲ. ಈ ಬಗ್ಗೆ ಸಮರ್ಪಕ ಕ್ರಮ ಕೈಗೊಳ್ಳಬೇಕು, ತಪ್ಪಿದಲ್ಲಿ ತೀವ್ರ ಹೋರಾಟ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.

ಪ್ರಸ್ತುತ ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹವಿದ್ದರೆ ಕುಚ್ಚೂರು ಮತ್ತು ಚಾರ ಗ್ರಾಪಂ ವ್ಯಾಪ್ತಿಯ ಸುಮಾರು 50ರಿಂದ 60 ರೈತರು ಪ್ರಯೋಜನ ಪಡೆಯಬಹುದು. ಒಂದು ವೇಳೆ ನಿಗದಿ ಪಡಿಸಿದ್ದ ಸ್ಥಳದಲ್ಲಿ ನಿರ್ಮಿಸಲಾಗುತ್ತಿದ್ದರೆ ಇನ್ನೂ ಹೆಚ್ಚಿನ ರೈತರಿಗೆ ಪ್ರಯೋಜನ ಆಗುತ್ತಿತ್ತು. ಜಿಲ್ಲಾಧಿಕಾರಿ, ರಾಜಕೀಯ ಮುಖಂಡರು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಸ್ಥಳ ತನಿಖೆ ಮಾಡಿ ಸಮರ್ಪಕ ಕ್ರಮ ಕೈಗೊಳ್ಳಬೇಕಾಗಿ ಗ್ರಾಮದ ಜನತೆ ಒತ್ತಾಯಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟಂತೆ ಗುತ್ತಿಗೆದಾರರ ಜತೆ ಮಾತುಕತೆ ನಡೆಸಲಾಗುವುದು. ಸಾರ್ವಜನಿಕರ ಸಮಸ್ಯೆಯನ್ನು ಗಂಭೀರ ಪರಿಗಣಿಸಿ ಸಮರ್ಪಕ ಕ್ರಮ ಕೈಗೊಳ್ಳುತ್ತೇನೆ.

ಪಾಲಣ್ಣ, ಸಹಾಯಕ ಇಂಜಿನಿಯರ್ ಉಡುಪಿ

ಈ ಕಾಮಗಾರಿಯನ್ನು ಗಮನಿಸಿದಾಗ ಅತ್ಯಂತ ಕಳಪೆ ಮಟ್ಟದೆಂದು ಬಿಂಬಿತವಾಗುತ್ತದೆ. ನಾವು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಧಿಕಾರಿಗಳು, ರಾಜಕೀಯ ನಾಯಕರು ಈ ಬಗ್ಗೆ ಗಮನ ವಹಿಸಲಿ. ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಲಾಗುವುದು.

ಪಾಂಡುರಂಗ ಪೂಜಾರಿ. ಸಾರ್ವಜನಿಕ

ಕಳಪೆ ಕಾಮಗಾರಿಯಿಂದಾಗಿ ಕಿಂಡಿ ಅಣೆಕಟ್ಟಿನ ಸೋರಿಕೆಯಿಂದಾಗಿ ಅಣೆಕಟ್ಟಿನಲ್ಲಿ ನೀರು ನಿಲ್ಲುತ್ತಿಲ್ಲ. ಹತ್ತಾರು ಬಾರಿ ಮನವಿ ಮಾಡಿದರೂ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸ್ಪಂದಿಸದಿರುವುದು ದೌರ್ಭಾಗ್ಯ. ಇದೇ ರೀತಿ ಮುಂದುವರಿದರೆ ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುವುದು.

ಮಿಥುನ ಶೆಟ್ಟಿ ಚಾರ, ಯುವ ಕೃಷಿಕರು